ವಿಜಯಪುರ, ೫: ಇಲ್ಲಿನ ಅಲಿಯಾಬಾದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ ಹೆಸರಿನ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಜೆ ಸಂಭವಿಸಿದ ದುರಂತದಲ್ಲಿ ಮೃತರಾಗಿರುವ ಏಳು ಕಾರ್ಮಿಕರ ಕುಟುಂಬುಕರಿಗೆ ತಲಾ 7 ಲಕ್ಷ ರೂ. ಹಾಗು ಗಾಯಾಳುಗಳಿಗೆ ಚಿಕಿತ್ಸೆಗೆಂದು ತಲಾ 50 ಸಾವಿರ ರೂ. ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಕಿಶೋರ್ ಜೈನ್ ಅವರ ಒಡೆತನದ ಈ ಉದ್ಯಮ ಘಟಕದಲ್ಲಿ ಮಿತಿ ಮೀರಿ ತುಂಬಿದ್ದ ಟ್ಯಾಂಕರುಗಳ ಪಿಲ್ಲರ್ ಗಳು ಸೋಮವಾರ ಕುಸಿದು, ಅದರಡಿಯಲ್ಲಿ ಕಾರ್ಮಿಕರು ಸಿಕ್ಕಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿಯಿಂದ ರಾತ್ರಿ ಇಲ್ಲಿಗೆ ಆಗಮಿಸಿದ್ದ ಸಚಿವರು ಮಂಗಳವಾರ ಬೆಳಿಗ್ಗೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ಎನ್ ಡಿಆರ್ ಎಫ್ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಸಚಿವರು ಅಭಿನಂದಿಸಿದರು.
ಈ ಬಗ್ಗೆ ಪತ್ರಿಕಾ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಮೃತ ಕಾರ್ಮಿಕರೆಲ್ಲರೂ ಬಿಹಾರದವರು. ಇವರ ಪಾರ್ಥಿವ ಶರೀರಗಳನ್ನು ಬೆಳಗಾವಿ ಅಥವಾ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪಾಟ್ನಾಗೆ ಕಳಿಸಿ ಕೊಡಲಾಗುವುದು. ಬಳಿಕ, ಮೃತ ಕಾರ್ಮಿಕರ ಊರುಗಳಲ್ಲಿರುವ ಕುಟುಂಬಗಳಿಗೆ ಶವಗಳನ್ನು ತಲುಪಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ವ್ಯವಸ್ಥೆ ಮಾಡಲಾಗಿದೆ ಎಂದರು.
ಮೃತರ ಕುಟುಂಬಗಳಿಗೆ ಕೈಗಾರಿಕೆಯ ಮಾಲೀಕರ ವತಿಯಿಂದ ತಲಾ 5 ಲಕ್ಷ ರೂ. ಮತ್ತು ಸರಕಾರದ ಕಡೆಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ವಿಷಯವಾಗಿದೆ. ಜೊತೆಗೆ, ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ಇರದಂತೆ ನೋಡಿಕೊಳ್ಳಲು ಹೆಚ್ಚಿನ ಸುರಕ್ಷಾ ಕ್ರಮಗಳಿಗೆ ಆದ್ಯತೆ ಕೊಡಲಾಗುವುದು. ಜತೆಗೆ, ಈ ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಅವರು ವಿವರಿಸಿದರು.
ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ವಿಪತ್ತು ಪರಿಹಾರ ಕಾರ್ಯಾಚರಣೆ ತಂಡಗಳು ಮೃತ ದೇಹಗಳನ್ನು ಹೊರತೆಗೆದಿದ್ದು, ಹೆಚ್ಚಿನ ಶೋಧ ಮುಂದುವರಿದಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಪಾಲನ್, ಜಿಲ್ಲಾ ಪೊಲೀಸ್ ವರಿಷ್ಠ ಹೃಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಡಿವೈಎಸ್ಸಿ ಬಸವರಾಜ ಯಲಿಗಾರ ಇದ್ದರು.