ಬೆಳಗಾವಿ : ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಕಳೆದ 5 ದಿನಗಳಿಂದ ಸತತ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದಿಂದ ಕೃಷ್ಣ ನದಿಗೆ ಹರಿದು ಬರುತ್ತಿರುವ ನೀರಿನಿಂದ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ.
ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಮಳೆಯಿಂದ ಮಲಪ್ರಭಾ, ಮಾರ್ಕಂಡೇಯ ಮತ್ತು ಘಟಪ್ರಭಾ ನದಿಗಳ ಪ್ರಮಾಣದಲ್ಲಿ ಏರಿಕೆಯಾಗಿ ಗೋಕಾಕ ತಾಲ್ಲೂಕಿನ ಗೋಕಾಕ-ಶಿಂಗಳಾಪುರ ಸೇತುವೆ ಎರಡು ದಿನಗಳಿಂದ ಜಲಾವೃತವಾಗಿದೆ. ಖಾನಾಪುರ ತಾಲ್ಲೂಕಿನ ಹಲವು ರಸ್ತೆಗಳಲ್ಲಿ ನೀರು ಸುಮಾರು 2 ಅಡಿಗಳಷ್ಟು ಎತ್ತರದಲ್ಲಿ ಹರಿಯುತ್ತಿರುವುದರಿಂದ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳು ಮುಖ್ಯ ಪಟ್ಟಣಗಳೊಂದಿಗೆ ಮೂರು ದಿನಗಳಿಂದ ಸಂಪರ್ಕ ಕಳೆದುಕೊಂಡಿವೆ. ಮೂರು ದಿನಗಳ ಹಿಂದೆ ಕಡಿತಗೊಂಡಿರುವ ವಿದ್ಯುತ್ ಇನ್ನೂ ಸ್ಥಾಪನೆಗೊಂಡಿಲ್ಲ.
ದಕ್ಷಿಣ ಮಹಾರಾಷ್ಟ್ರದಲ್ಲಿ ಕಳೆದ ವಾರದಿಂದ ಅವ್ಯಾಹಿತವಾಗಿ ಸುರಿಯುತ್ತಿರುವ ಮಳೆಯಿಂದ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ದೂದಗಂಗಾ ನದಿಯಿಂದ ಕೃಷ್ಣಾ ನದಿಗೆ 49,500 ಕ್ಯೂಸೆಕ್ ಮತ್ತು ರಾಜಾರಾಮ ಜಲಾಶಯದಿಂದ 65,000 ಕ್ಯೂಸೆಕ್ ನೀರು ಬಿಡಲಾಗಿದೆ, ಹಾಗಾಗಿ ಗೋಕಾಕ, ಖಾನಾಪುರ ಸೇರಿದಂತೆ ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕಿನ ಒಟ್ಟು 17 ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ತುಂಬಿ ಹರಿಯುತ್ತಿರುವ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಿರುವ ಪೊಲೀಸರು ಸೇತುವೆಗಳ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ದಿನದ 24 ಗಂಟೆಯೂ ಪೊಲೀಸ್ ಕಾವಲು ಹಾಕಿದ್ದಾರೆ.