ಬೆಂಗಳೂರು: ಪೊಲೀಸರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅಮಾನತುಗೊಳ್ಳುತ್ತಿದ್ದು, ಈ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಕಳೆದ 9 ತಿಂಗಳಲ್ಲಿ ಅಧಿಕ ಮಂದಿ ಸಸ್ಪೆಂಡ್ ಆಗಿದ್ದಾರೆ.
2022 ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 235 ಪೊಲೀಸರು ಅಮಾನತಾಗಿದ್ದಾರೆ. 2019ರಲ್ಲಿ-122 ಮಂದಿ, 2020ರಲ್ಲಿ-159 ಮಂದಿ ಹಾಗೂ 2021ರಲ್ಲಿ-319 ಮಂದಿ ಪೊಲೀಸರು ಈ ಶಿಕ್ಷೆ ಅನುಭವಿಸಿದ್ದರು.
ಆದರೆ ವರ್ಷದಿಂದ ವರ್ಷಕ್ಕೆ ಅಧಿಕಾರದ ಪ್ರಭಾವ ಬಳಸಿ ಅಕ್ರಮ ಕೂಟದಲ್ಲಿ ಹೆಚ್ಚು ಪೊಲೀಸರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಹೆಚ್ಚು ಹಣ ಸಂಪಾದನೆ ಮಾಡುವ ದುರಾಸೆಗೆ ಬಿದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಮಾಣ ಜಾಸ್ತಿಯಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯ ಲೋಪದಡಿ 1,688 ಪೊಲೀಸ್ ಅಧಿಕಾರಿಗಳು ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಇದರಲ್ಲಿ 835 ಅಮಾನತುಗೊಂಡವರಾದರೆ, 68 ಮಂದಿ ವಜಾಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ.