ಹೊಸದಿಲ್ಲಿ: 2002 ರ ಗುಜರಾತ್ ನರಸಂಹಾರ ಪ್ರಕರಣಕ್ಕೆ ಸಂಬಂಧಿಸಿದ ಬಿಬಿಸಿ ತಯಾರಿಸಿರುವ “ಇಂಡಿಯಾ : ದಿ ಮೋದಿ ಕ್ವೆಶ್ಚನ್” ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ 24 ವಿದ್ಯಾರ್ಥಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಜೆಎನ್ ಯು ಹಾಗೂ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವಿಷಯವಾಗಿ ಗಲಾಟೆ ಉಂಟಾಗಿತ್ತು. ಈ ಬೆನ್ನಲ್ಲೇ ದೆಹಲಿ ವಿವಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಬೆಳವಣಿಗೆ ನಡೆದಿದೆ.
ಸಂಜೆ 4 ಗಂಟೆ ವೇಳೆಗೆ 20 ಮಂದಿ ಕಲಾ ವಿಭಾಗದಿಂದ ಹೊರಬಂದು ನಿರ್ಬಂಧಿಸಿರುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯತ್ನಿಸಿದರು. ಈ ನಡೆ ಶಾಂತಿ ಹಾಗೂ ಪ್ರಶಾಂತ ವಾತಾವರಣ ಕದಡುವ ಸಾಧ್ಯತೆ ಇರುವುದರಿಂದ ಅವರನ್ನು ಅಲ್ಲಿಂದ ತೆರಳುವಂತೆ ಹೇಳಲಾಯಿತು. ಆದರೆ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಶಾಂತಿಯುತವಾಗಿ ವಶಕ್ಕೆ ಪಡೆಯಲಾಯಿತು ಎಂದು ಉತ್ತರ ವಿಭಾಗದ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.