ನವದೆಹಲಿ: ಭಾರತದಲ್ಲಿ 26.85 ಲಕ್ಷ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ಬಳಕೆದಾರರು ಫ್ಲ್ಯಾಗ್ ಮಾಡುವ ಮೊದಲು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಆಗಸ್ಟ್‌ನಲ್ಲಿ ನಿಷೇಧಿಸಲಾದ 23.28 ಲಕ್ಷ ಖಾತೆಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧಿಸಲಾದ ಖಾತೆಗಳ ಸಂಖ್ಯೆ 15 ಪ್ರತಿಶತ ಹೆಚ್ಚಾಗಿದೆ. 1 ಸೆಪ್ಟೆಂಬರ್, 2022 ಮತ್ತು 30 ಸೆಪ್ಟೆಂಬರ್, 2022 ರ ನಡುವೆ 26,85,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ.
ಇದರಲ್ಲಿ 8,72,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ.
ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ದ್ವೇಷದ ಭಾಷಣ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಕಾರಣದಿಂದ ತೀವ್ರ ಟೀಕೆಗೊಳಗಾಗಿದ್ದವು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಂಟೆಂಟ್ ತೆಗೆದು ಹಾಕುವಲ್ಲಿ ಮತ್ತು ಬಳಕೆದಾರರನ್ನು ನಿಷೇಧಿಸುವಲ್ಲಿ ನಿರಂಕುಶವಾಗಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿವೆ ಎಂದು ಬಹುದೊಡ್ಡ ಸಂಖ್ಯೆಯ ಬಳಕೆದಾರರು ಆರೋಪಿಸಿದ್ದಾರೆ.
ದೊಡ್ಡ ಟೆಕ್ ಕಂಪನಿಗಳ ಅನಿಯಂತ್ರಿತ ಕಂಟೆಂಟ್ ಮಾಡರೇಶನ್, ನಿಷ್ಕ್ರಿಯತೆ ಅಥವಾ ಟೇಕ್‌ಡೌನ್ ನಿರ್ಧಾರಗಳ ವಿರುದ್ಧ ಕುಂದುಕೊರತೆ ಮೇಲ್ಮನವಿ ಕಾರ್ಯವಿಧಾನವನ್ನು ಸ್ಥಾಪಿಸಲು ಸರ್ಕಾರವು ಕಳೆದ ವಾರ ನಿಯಮಗಳನ್ನು ಪ್ರಕಟಿಸಿತ್ತು. ಇತ್ತೀಚಿನ ವಾಟ್ಸ್ಆಯಪ್ ವರದಿಯ ಪ್ರಕಾರ, ಅದು ಸೆಪ್ಟೆಂಬರ್‌ನಲ್ಲಿ 666 ದೂರುಗಳನ್ನು ಸ್ವೀಕರಿಸಿದೆ ಮತ್ತು 23 ದೂರುಗಳ ವಿಚಾರದಲ್ಲಿ ಮಾತ್ರ ಕ್ರಮ ಕೈಗೊಂಡಿದೆ.