ಬೆಳಗಾವಿ : ಪುಷ್ಪಾ ಚಲನಚಿತ್ರದಲ್ಲಿ ತೋರಿಸಿದಂತೆ ಗೋವಾದಿಂದ ಬೆಳಗಾವಿಗೆ ಟ್ರಕ್ ನಲ್ಲಿ ತೆಗೆದುಕೊಂಡು ಬರುತ್ತಿದ್ದ 27,52,398 ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಅಬಕಾರಿ ಚೆಕ್ ಪೋಸ್ಟನಲ್ಲಿ ವಶಕ್ಕೆ ಪಡೆದಿದ್ದಾರೆ.
ಯಾವುದೇ ಅನುಮತಿಯಿಲ್ಲದೇ ಮದ್ಯ ಸಾಗಿಸುತ್ತಿದ್ದ ಅಂದಾಜು ₹2.5 ಲಕ್ಷ ಮೌಲ್ಯದ ಟ್ರಕ್ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲಾ ಅಬಕಾರಿ ಆಯುಕ್ತ ಮಂಜುನಾಥ ಅವರಿಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಖಾನಾಪೂರ ಮತ್ತು ಬೆಳಗಾವಿಯಿಂದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡವನ್ನು ಕಳಿಸಿ, ಕಣಕುಂಬಿ ಬಳಿ ಇರುವ ಚೆಕ್ ಪೋಸ್ಟ ಮೂಲಕ ಸಾಗುವ ಎಲ್ಲ ವಾಹನಗಳ ಪರಿಶೀಲನೆ ನಡೆಸಲು ಆದೇಶಿಸಿದ್ದರು. ಆಗ ಲಾರಿಯೊಂದನ್ನು ತಪಾಸಣೆ ಮಾಡಿದಾಗ ಲಾರಿಯ ಹಿಂಬದಿ ಟ್ಯಾಂಕಿನ ಕಂಪಾರ್ಟಮೆಂಟನಲ್ಲಿ ಅಪಾರ ಪ್ರಮಾಣದ ಗೋವಾ ಮದ್ಯವನ್ನು ಬಚ್ಚಿಟ್ಟಿದ್ದು ಪತ್ತೆಯಾಯಿತು. ಬೇರೆ ಕಂಪಾರ್ಟಮೆಂಟ್ ಮಾಡಿ ತೆರೆಯಲು ಆಗದ ಹಾಗೆ ವೆಲ್ಡಿಂಗ್ ಸಹ ಮಾಡಲಾಗಿತ್ತು. ಹಾಗಾಗಿ ವಾಹನವನ್ನು ಖಾನಾಪೂರ ಅಬಕಾರಿ ಕಚೇರಿಗೆ ತೆಗೆದುಕೊಂಡು ಹೋಗಿ ಜೆಸಿಬಿ ಸಹಾಯಕದ ಮೂಲಕ ಲಾರಿಯ ಹಿಂಭಾಗವನ್ನು ತೆರೆದು ಅದರಲ್ಲಿದ್ದ ಮದ್ಯ ವಶಕ್ಕೆ ಪಡೆಯಲಾಯಿತು.
ಲಾರಿಯ ಚಾಲಕ ಮತ್ತು ಕ್ಲೀನರ್ ಇಬ್ಬರನ್ನೂ ಬಂಧಿಸಿ, ಖಾನಾಪೂರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.