ಧಾರವಾಡ : ಕಾರ್ ಮತ್ತು ಟ್ರಕ್ ನಡುವೆ ಧಾರವಾಡ ಬೈಪಾಸ್ ಬಳಿ ಅಪಘಾತಗಳು ಮುಂದುವರಿವೆ. ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಸನ ಮೂಲದ ಮೂವರು ಅಸುನೀಗಿದ್ದಾರೆ.
ಅಸುನೀಗಿದವರನ್ನು ಹೊಳೆನರಸೀಪುರ ತಾಲೂಕಿನ ತಾತನಹಳ್ಳಿಯ ಚಂದನ್, ಬದನಹಳ್ಳಿಯ ಪುಟ್ಟಣ್ಣ ಮಡಿಕೇರಿ ಮತ್ತು ಹೊಳೆನರಸೀಪುರದ ಟಿ ವಿ ದೀಪು ಎಂದೂ ಗಾಯಗೊಂಡವರನ್ನು ಕಿರಣ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಕಾರ್ ವಿಪರೀತ ವೇಗವಾಗಿ ಧಾರವಾಡದಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದಾಗ ಬೈಪಾಸ್ ರಸ್ತೆಯ ಕ್ಯಾರಕೊಪ್ಪ ಸೇತುವೆಯ ಹತ್ತಿರ ಎದುರಿನಿಂದ ಬಂದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬರು ಆಸ್ಪತ್ರೆ ಸಾಗಿಸುವಾಗ ಕೊನೆಯುಸಿರೆಳೆದರು. ಗಾಯಗೊಂಡಿರುವ ಕಿರಣ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.