ರಾಯಬಾಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಮಿಷನ್ ಪ್ರಕರಣದಿಂದ ರಾಷ್ಟ್ರ ಮಟ್ಟದಲ್ಲಿ ‘40% ಕಮಿಷನ್’ ಸರಕಾರ ಎಂದು ಕುಖ್ಯಾತಿಗೊಳಗಾಗಿರುವ ಬಿಜೆಪಿ ಈಗ ಅಂತಹದೇ ಮತ್ತೊಂದು ಪ್ರಕರಣದ ಆರೋಪಕ್ಕೆ ಗುರಿಯಾಗಿದೆ.
ರಾಯಬಾಗ ತಾಲೂಕಿನ ಮೇಖಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಮೀಷನ್ ಬೇಡಿಕೆ ಇಟ್ಟಿರುತ್ತಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಖಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಗ್ರಾ.ಪಂ. ಯೋಜನೆಯಡಿ ಬರುವ ೧೪ನೇ, ೧೫ನೇ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುದಾನಗಳಿಗೆ ಅನುಮತಿ ಪಡೆಯಲು ಪ್ರತಿ ಶತ ಹಣವನ್ನು ತಾ.ಪಂ. ಮತ್ತು ಜಿ.ಪಂ.ಯರಿಗೆ ನೀಡಬೇಕೆಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಸುವ ಕಾಮಗಾರಿ ಕಾರ್ಯಗಳಿಗೆ ಪಿಡಿಒ ಅವರಿಗೆ ಶೇ 10% ಇಂಜನೀಯರ ಅವರಿಗೆ ಶೇ10% ತಾ.ಪಂ. ಎಡಿ ಮತ್ತು ಇಒ ಅವರಿಗೆ ಶೇ 7% ಹಾಗೂ ಟೆಕ್ನಿಕಲ್ದವರಿಗೆ ಪ್ರತಿಶತ ಶೇ 3% ಹೀಗೆ ಒಟ್ಟು ಪ್ರತಿಶತ ಶೇ 30 % ರಷ್ಟು ನೀಡಬೇಕೆಂದು ಅಧಿಕಾರಿ ಕೇಳುತ್ತಾರೆಂದು ಆರೋಪಿಸಿ, ತಮಗೆ ಹಣ ನೀಡಲು ಆಗದೇ ಇರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧಿಸಿದಂತೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಪಿಡಿಒ ಮಂಜುನಾಥ ದಳವಾಯಿ ಅವರು, ಈ ಪ್ರಕರಣ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸಿದರು.