ಹನೂರು: ಕರ್ನಾಟಕದ 40 ಪರ್ಸೆಂಟ್ ಕಮೀಷನ್ ಪಡೆಯುವ ಬಿಜೆಪಿ ಸರ್ಕಾರ ಪ್ರತಿ ದಿನ ಲೂಟಿಯಲ್ಲಿ ತೊಡಗಿದ್ದು ಈ ವರೆಗೆ ₹1.5 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಆರೋಪಿಸಿದರು.
ಹನೂರಿನಲ್ಲಿ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಎಷ್ಟು ದೊಡ್ಡ ಮೊತ್ತ? ಜನರಿಗೆ ಇದರ ಬಗ್ಗೆ ಅರ್ಥವೇ ಆಗಿಲ್ಲ. ಈ ಹಣದಲ್ಲಿ ಎಷ್ಟೊಂದು ಕೆಲಸ ಮಾಡಬಹುದಿತ್ತು? 100 ಏಮ್ಸ್ ನಿರ್ಮಾಣ ಮಾಡಬಹುದಿತ್ತು. 177 ಇಎಸ್ ಐ ಆಸ್ಪತ್ರೆಗಳನ್ನು ಕಟ್ಟಬಹುದಿತ್ತು. 30 ಸಾವಿರ ಸ್ಮಾರ್ಟ ಕ್ಲಾಸ್ ಗಳನ್ನು ಮಾಡಬಹುದಿತ್ತು. 750 ಕಿ.ಮೀ ಉದ್ದದ ಮೆಟ್ರೊ ಮಾರ್ಗ ನಿರ್ಮಾಣ ಮಾಡಬಹುದಿತ್ತು. 2,250 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಮಾಡಬಹುದಿತ್ತು. ಬಡವರಿಗೆ ₹30 ಲಕ್ಷ ಮನೆಗಳನ್ನು ನಿರ್ಮಿಸಬಹುದಿತ್ತು ಎಂದು ಹೇಳಿದರು.
ಈ ಬಿಜೆಪಿ ಸರ್ಕಾರ ಬಂದ ನಂತರ ನಿಮಗೆ ಒಳ್ಳೆಯದಾಗಿದೆಯೇ? ಬೆಲೆ ಏರಿಕೆ ಆಗಿಲ್ಲವೇ? ನೀವೇ ಸಾಕಷ್ಟು ಅನುಭವಿಸಿದ್ದೀರಿ. ನಿಮ್ಮ ವಿಕಾಸ ಆಗಿಲ್ಲ. ನಿಮ್ಮ ಕಷ್ಟ ನಮಗೆ ಅರ್ಥವಾಗಿದೆ. ನಮಗೆ ನಿಮ್ಮ ಬಗ್ಗೆ ಕಾಳಜಿ ಇದೆ. ಅದಕ್ಕಾಗಿ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ₹2000 ನಗದು, ಪದವೀಧರರಿಗೆ ₹3000, ಡಿಪ್ಲೊಮಾ ಮಾಡಿರುವವರಿಗೆ ಪ್ರತಿ ತಿಂಗಳು ₹1,500 ನೀಡುವ ಘೋಷಣೆ ಮಾಡಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ವಿವರಿಸಿದರು.
ಈ ಚುನಾವಣೆಯನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮತ್ತು ಯುವ ಜನರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದು. ನಿಮಗೆ ನಿಮ್ಮ ಹಕ್ಕು, ಅಧಿಕಾರವನ್ನು ನೀಡುತ್ತೇವೆ. ಹಿಂದೆ ಕಾಂಗ್ರೆಸ್ ಇದ್ದಾಗ ಅನ್ನ ಭಾಗ್ಯ, ಕೃಷಿ ಭಾಗ್ಯದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಪ್ರಿಯಾಂಕಾ ಹೇಳಿದರು.
ದೇಶದ ಆತ್ಮಾಭಿಮಾನ, ಗೌರವ ಉಳಿಸುವ ಸರ್ಕಾರವನ್ನು ತಾವು ತರಬೇಕು. ಇದರಲ್ಲಿ ಹೆಣ್ಣುಮಕ್ಕಳ ಜವಾಬ್ದಾರಿ ಹೆಚ್ಚಿದ್ದು ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್ ಸರ್ಕಾರ ಬಂದರೆ ನಿಮ್ಮ ವಿಕಾಸವನ್ನು ಆಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ನಂದಿನಿಯನ್ನು ಮುಗಿಸಲು ಹೊರಟಿದ್ದಾರೆ. ಗುಜರಾತ್ ರಾಜ್ಯ ಅಮೂಲ್ ಸಂಸ್ಥೆಯನ್ನು ಕರ್ನಾಟಕದ ನಂದಿನಿಯೊಂದಿಗೆ ವಿಲೀನ ಮಾಡಲು ಯೋಚಿಸುತ್ತಿದ್ದಾರೆ. ಇಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ, ಇಲ್ಲಿ ಎಷ್ಟು ಹಾಲಿತ್ತು ಎಂದರೆ ಕ್ಷೀರ ಭಾಗ್ಯ ಎಂಬ ಯೋಜನೆ ಜಾರಿಗೆ ತಂದಿದ್ದೆವು. ಶಾಲಾ ಮಕ್ಕಳಿಗೆ ಬಿಸಿ ಬಿಸಿ ಹಾಲು ಕೊಡುತ್ತಿದ್ದೆವು. ಹಾಗಿರುವಾಗ ಇಷ್ಟು ಬೇಗ ಹೇಗೆ ಹಾಲು ಉತ್ಪಾದನೆ ಕಡಿಮೆಯಾಯಿತು ಎಂದು ಪ್ರಿಯಾಂಕಾ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳಿತ್ತು. ಆದರೆ ಪ್ರತಿ ದಿನ ರೈತನಿಗೆ 27 ರೂ. ಮಾತ್ರ ಸಿಗುತ್ತಿದೆ. ನೀವು ನಂಬಿಕೆ, ವಿಶ್ವಾಸ ಇಟ್ಟು ಸರ್ಕಾರವನ್ನು ಗೆಲ್ಲಿಸಿದಿರಿ. ಗೆದ್ದ ಬಳಿಕ ಲೂಟಿಯಲ್ಲಿ ತೊಡಗಿದ್ದಾರೆ. ಪ್ರಧಾನಿಯವರಿಗೆ ಅದಾನಿ ಎಂಬ ಉದ್ಯಮಿ ಮಿತ್ರ ಇದ್ದಾರೆ. ಸರ್ಕಾರದ ಕಂಪನಿಗಳು, ಸಂಸ್ಥೆಗಳನ್ನು ಆ ಮಿತ್ರನಿಗೆ ಮಾರಾಟ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಸಿಗಬೇಕಾಗಿದ್ದ ಉದ್ಯೋಗಗಳೆಲ್ಲ, ಅವರ ಬಳಿ ಇವೆ. ಆ ಉದ್ಯಮಿ ಪ್ರತಿ ದಿನ ಲಕ್ಷ ಕೋಟಿ ಸಂಪಾದಿಸುತ್ತಾರೆ. ರೈತರಿಗೆ ಪ್ರತಿ ದಿನ ₹27 ಸಿಗುತ್ತಿದೆಯಷ್ಟೇ’ ಎಂದರು.