ಬೆಂಗಳೂರು: ಬೆಂಗಳೂರಿನ ಹಲವೆಡೆ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ಸರ್ಕಾರದ ವಿರುದ್ಧ 40 % ಪರ್ಸೆಂಟ್ ಕಮಿಷನ್ ಆರೋಪದ ಈ ರೀತಿಯ ಪ್ರಚಾರ ನಡೆಸಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಕಮಿಷನ್ ಇಲ್ಲದೇ ಯಾವುದೇ ಕೆಲಸ ಆಗುವುದೇ ಇಲ್ಲ ಎಂದು ಆರೋಪಿಸಿ ನಿರಂತರ ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷವು ಪೇ-ಸಿಎಂ ಅಭಿಯಾನ ಆರಂಭಿಸಿ ಇನ್ನೊಂದು ಹಂತದ ಹೋರಾಟದ ಅಸ್ತ್ರ ಪ್ರಯೋಗಿಸಿದೆ.
ಇಂದು ಬೆಂಗಳೂರು ನಗರದಾದ್ಯಂತ ಕ್ಯೂಆರ್ ಕೋಡ್ನೊಂದಿಗೆ ಪೇ-ಸಿಎಂ ಪೋಸ್ಟರ್ಗಳು ಕಂಡು ಬಂದಿವೆ. ಮುಖ್ಯಮಂತ್ರಿ ಅವರ ಭಾವಚಿತ್ರವಿರುವ ಪೇ-ಸಿಎಂ ಶೀರ್ಷಿಕೆಯ ಪೋಸ್ಟರ್ಗಳನ್ನು ಬೆಂಗಳೂರು ನಗರದಾದ್ಯಂತ ಅಂಟಿಸಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದೆ.
ಈ ಕ್ಯೂಆರ್ ಕೋಡ್ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಅದು ಬಳಕೆದಾರರನ್ನು ದೂರುಗಳಿಗಾಗಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ 40% ಕಮಿಷನ್ ಸರ್ಕಾರ ವೆಬ್ಸೈಟ್ಗೆ ಕರೆದೊಯ್ಯುತ್ತದೆ. ಸಾರ್ವಜನಿಕರು ನೇರವಾಗಿ ಈ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ಸರ್ಕಾರದ ಭ್ರಷ್ಟಾಚಾರದ ಕುರಿತು ತಮ್ಮ ಅನಿಸಿಕೆಗಳನ್ನು ಸಹ ಹಂಚಿಕೊಳ್ಳಬಹುದಾಗಿದೆ. ಇನ್ನು ಈ ಅಭಿಯಾನಕ್ಕೆ ಬಿಜೆಪಿ ಕೆಂಡವಾಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ವಿರುದ್ಧವೂ ಕ್ಯೂಆರ್ ಕೋಡ್ ಅಭಿಯಾನ
ಬಿಜೆಪಿ ನಾಯಕರ ಗಮನಕ್ಕೆ ತಂದು ಪೋಸ್ಟರ್ ಬಿಡುಗಡೆಗೆ ಬಿಜೆಪಿ ಪ್ಲ್ಯಾನ್ ಮಾಡಲು ನಿರ್ಧರಿಸಿದೆ. ಸಿದ್ದರಾಮಯ್ಯ, ಇಡಿ ಡಿ.ಕೆ ಶಿವಕುಮಾರ ಅಂತ ಬಿಜೆಪಿ ಪೋಸ್ಟರ್ ರೆಡಿ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಪ್ರಾರಂಭಿಸಲು ಬಿಜೆಪಿ ನಿರ್ಧಾರಿಸಿದೆ.
ಸ್ಕ್ಯಾನ್ ಕೋಡ್ ಮೇಲೆ ಸಿದ್ದರಾಮಯ್ಯ, ಡಿಕೆಶಿವಕುಮಾರ ಚಿತ್ರ ಹಾಕಿ, ರಾಜ್ಯ ಲೂಟಿ ಮಾಡಿದ ಈ ಭ್ರಷ್ಟ ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ ಅಂತ ಟಾಂಗ್ ನೀಡಿದೆ.
ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಮಾಡಲು ಸಿದ್ಧತೆ ನಡೆಸಿದೆ. ಹಿರಿಯ ನಾಯಕರ ಗಮನಕ್ಕೆ ತಂದು ಅಭಿಯಾನ ನಡೆಸಲು ಮುಂದಾಗಿದೆ.
ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ
ಇನ್ನು ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ ಪೇ ಸಿಎಂ ಎಂಬ ಬೆಂಗಳೂರಿನಲ್ಲಿ ಅಂಟಿಸಿರುವ ಪೋಸ್ಟರ್ ಕುರಿತಂತೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ ಪೇ ಸಿಎಂ ಪೋಸ್ಟರ್ ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಮುಂದೆ ಹಾಗೂ ರಸ್ತೆಗಳಲ್ಲಿ ಪೋಸ್ಟರ್ ಹಾಕಲಾಗಿತ್ತು. ಸಿಎಂ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಿಬಿಎಂಪಿ ಸಿಬ್ಬಂದಿ, ಪೊಲೀಸರಿಂದ ತೆರವು ಮಾಡಲಾಗಿದೆ.