ವಿಜಯಪುರ, ೨೬: ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುವಷ್ಟು ಭ್ರಷ್ಟಾಚಾರವಾಗಿದೆ. ಕೋವಿಡ್ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ 40 ಸಾವಿರ ಕೋಟಿ ರೂ. ಗುಳುಂ ಮಾಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಪಕ್ಷದ ವಿರುದ್ಧ ಸ್ಫೋಟಕ ಟೀಕೆ ಮುಂದುವರಿಸಿದ್ದಾರೆ..
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಟೀಕೆ ಮಾಡುತ್ತಿರುವ ನನಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರಹಾಕಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಯತ್ನಾಳ ಸವಾಲು ಹಾಕಿದರು.
ಜನವರಿ 5ಕ್ಕೆ ಡಿ.ಕೆ. ಶಿವಕುಮಾರ ವಿರುದ್ಧ ಹೈಕೋರ್ಟನಲ್ಲಿ ಹೂಡಿರುವ ಪ್ರಕರಣದ ವಿಚಾರಣೆಯಿದೆ. ಬಳಿಕ ಅಪ್ಪಾಜಿ ಅವರದ್ದು ಹೊರ ತೆಗೆಯುತ್ತೇನೆ. ಕೋವಿಡ್ ಸಂದರ್ಭದಲ್ಲಿ ಮಾಡಿದ 40 ಸಾವಿರ ಕೋಟಿ ರೂ. ಅವ್ಯವಹಾರ ಬಯಲಿಗೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರ ಎಚ್ಚರಿಕೆ ನೀಡಿದರು.
ಕೋವಿಡ್ ಕಾಲಘಟ್ಟದಲ್ಲಿ 45 ರೂ ಮಾಸ್ಕಗೆ 485 ರೂ. ಖರ್ಚು ಹಾಕಲಾಗಿದೆ. ಬೆಂಗಳೂರಿನಲ್ಲಿ ದಿನಕ್ಕೆ 10 ಸಾವಿರ ಒಂದು ಬೆಡ್ ಬಾಡಿಗೆ ಪಡೆದಿದ್ದಾರೆ. ಬಾಡಿಗೆ ಪಾವತಿಸಿದ ಹಣದಲ್ಲೇ ಬೆಡ್ ಖರೀದಿಸಿದ್ದರೆ ಎರಡೆರಡು ಬೆಡ್ ಬರುತ್ತಿದ್ದವು. ಇದರಲ್ಲಿ ಸಾವಿರ ಸಾವಿರ ಕೋಟಿ ಕೊಳ್ಳೆ ಹೊಡೆದಿದ್ದಾರೆ ಎಂದು ಸರ್ಕಾರ ನಡೆಸಿದ ಸ್ವಪಕ್ಷೀಯರನ್ನೇ ಪ್ರಶ್ನಿಸಿದರು.
ಕೋವಿಡ್ ವೇಳೆ 40 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ. ಪ್ರತಿ ರೋಗಿಗೆ 8-10 ಲಕ್ಷ ರೂ. ಬಿಲ್ ಮಾಡಿದ್ದಾರೆ. ಸರ್ಕಾರದ ಯಾವ ಪಕ್ಷದ್ದಾದರೂ ಏನು, ಕಳ್ಳರು ಕಳ್ಳರೇ. ಯಡಿಯೂರಪ್ಪ ಅವರ ಬಗ್ಗೆ ಸದನದಲ್ಲೇ ಹೇಳಿದ್ದೇನೆ. ಕೋವಿಡ್ ಸೋಂಕಿತನಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ನನ್ನಿಂದ 5.80 ಲಕ್ಷ ರೂ. ಬಿಲ್ ಪಡೆದಿದ್ದರು. ಇಷ್ಟೊಂದು ಹಣವನ್ನು ಬಡವರು ಪಾವತಿಸಲು ಸಾಧ್ಯವೇ ಎಂದು ವಿಧಾನಸಭೆಯಲ್ಲೇ ಪ್ರಶ್ನಿಸಿದ್ದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಶಾಸಕರಿಗೆ ಮಾಸಿಕ 2 ಲಕ್ಷ ರೂ. ಸಂಬಳ, ಸಮಿತಿ ಸಭೆಯಲ್ಲಿ ಪಾಲ್ಗೊಂಡರೆ 65 ಸಾವಿರ ರೂ. ಸಿಗುತ್ತದೆ. ಆದರೆ ಈ ವರೆಗೂ ಆರೋಗ್ಯದ ವಿಷಯವಾಗಿ ನಾನು ಸರ್ಕಾರದಿಂದ ಈ ವರೆಗೂ ಹಣವನ್ನೇ ಪಡೆದಿಲ್ಲ ಎಂದರು.