ವಿಜಯಪುರ : ತರಗತಿ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಎಚ್ ಪಿ ಎಸ್ ಕಾಲೇಜು ದ್ವಿತೀಯ ಪದವಿ ಪೂರ್ವ ತರಗತಿಯ 48 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡದ ಘಟನೆ ನಡೆದಿದೆ.
ಇಂದಿನಿಂದ ರಾಜ್ಯದಾದ್ಯಂತ ಪಿಯುಸಿ-೨ ಪರೀಕ್ಷೆಗಳು ಆರಂಭಗೊಂಡಿವೆ. ಹಾಜರಾತಿ ಕಡಿಮೆಯಿದ್ದರೂ ವಿದ್ಯಾರ್ಥಿಗಳಿಂದ ಫೀಸ್ ಪಡೆದು ಪರೀಕ್ಷೆಯ ಫಾರ್ಮ ಪಡೆದುಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಹಾಜರಾಗಲು ಅನುಮತಿ ಕೂಡ ನೀಡಿ ಹಾಲ್ ಟಿಕೆಟ್ ನೀಡಿತ್ತು.
ನಿನ್ನೆ ತಮ್ಮ ಹಾಲ್ ಟಿಕೆಟ್ ಪಡೆದ ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಬರೆಯಲು ಬಂದು ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡಿದ್ದರು. ಆಗ ಅಲ್ಲಿಗೆ ಬಂದ ಕಾಲೇಜು ಸಿಬ್ಬಂದಿ 48 ವಿದ್ಯಾರ್ಥಿಗಳನ್ನು ಹೊರಗೆ ಹಾಕಿದೆ. ಇದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ತರಗತಿಗೆ ಹಾಜರಾತಿ ಕಡಿಮೆ ಇದ್ದಿದ್ದರೆ ಪರೀಕ್ಷಾ ಮಂಡಳಿ ಹಾಲ್ ಟಿಕೆಟ್ ಏಕೆ ನೀಡಿದೆ, ಅದನ್ನು ಕಾಲೇಜನವರು ತಮಗೆ ಕೊಟ್ಟದೇಕೆ, ಈ ಕುರಿತು ಮೊದಲೇ ಏಕೆ ತಿಳಿಸಲಿಲ್ಲ ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ಕೇಳಿದ್ದಾರೆ. ಇಂದು ಪ್ರಥಮ ಭಾಷಾ ಪರೀಕ್ಷೆ ಇತ್ತು. ಈ ವಿದ್ಯಾರ್ಥಿಗಳು ಕನ್ನಡ ಪರೀಕ್ಷೆ ಬರೆಯಬೇಕಿತ್ತು.