ಪುಣೆ: ಪುಣೆಯ ನವಲೆ ಸೇತುವೆಯಲ್ಲಿ ಒಂದು ಟ್ಯಾಂಕರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪುಣೆ ಸಮೀಪದ ನವಲೆ ಬ್ರಿಡ್ಜ್ನಲ್ಲಿ ನಡೆದಿದೆ.
ಅಪಘಾತದಲ್ಲಿ 48 ವಾಹನಗಳು ಜಖಂಗೊಂಡಿವೆ ಎಂದು ಪುಣೆ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ಯಾಂಕರ್‌ನ ಬ್ರೇಕ್ ವಿಫಲವಾಗಿದ್ದು, ಟ್ಯಾಂಕರ್ ಚಾಲಕನ ನಿಯಂತ್ರಣಕ್ಕೆ ಬಾರದೇ ಮತ್ತು ರಸ್ತೆಯಲ್ಲಿ ತೈಲ ಚೆಲ್ಲಿದ ಕಾರಣ ಅದು ಜಾರುವಂತಾಗಿ ಒಂದಕ್ಕೊಂದು ವಾಹನಗಳಿಗೆ ಡಿಕ್ಕಿ ಹೊಡೆದಿವೆ. ಮುಂಬೈಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, 2 ಕಿ.ಮೀ.ಗೂ ಹೆಚ್ಚು ಜಾಮ್ ಉಂಟಾಗಿದೆ ಎಂದು ವರದಿಯಾಗಿದೆ.



