ಚಿತ್ರದುರ್ಗ, ೨೯: ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಮನೆಯೊಂದರಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿವೆ. ಬೀದಿ ನಾಯಿಗಳು ತಲೆಬುರುಡೆಯೊಂದನ್ನು ಬೀದಿಗೆ ತಂದಾಗ ಘಟನೆ ಬೆಳಕಿಗೆ ಬಂದಿದೆ.
ಸತತ 4 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಪಾಳು ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿವೆ ಎಂದು ದೂರು ದಾಖಲಾಗಿದೆ.
ಘಟನೆ ಸಂಬಂಧ ಪವನ ಕುಮಾರ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಮನೆಯಲ್ಲಿ ತಮ್ಮ ಸಂಬಂಧಿ, ನಿವೃತ್ತ ಇಂಜಿನೀಯರ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ ಹಾಗೂ ನರೇಂದ್ರರೆಡ್ಡಿ ವಾಸವಾಗಿದ್ದರು ಎಂದು ಪವನ ಕುಮಾರ ತಿಳಿಸಿದ್ದಾರೆ. ಈ ಅಸ್ಥಿಪಂಜರಗಳು ಅವರದ್ದೇ ಇರಬಹುದು ಎಂದು ಹೇಳಲಾಗಿದೆ.
ಈ ಮನೆಯಲ್ಲಿ ಕಳ್ಳತನ ನಡೆದಿತ್ತಾ ಎಂಬ ಅನುಮಾನ ಸಹ ಮೂಡಿದೆ. ಸಾವಿಗೂ ಮುನ್ನ ಮನೆ ಪೂರ್ಣ ಅಸ್ತವ್ಯಸ್ಥ ಮಾಡಿಕೊಂಡಿತ್ತಾ? ಎಂಬ ಪ್ರಶ್ನೆ ಸಹ ಮೂಡಿದೆ. ವ್ಹೀಲ್ ಚೇರ್, ಮೆಡಿಸನ್, ಆಕ್ಸಿಜನ್ ಸಿಲೆಂಡರ್ ಸಹ ಮನೆಯಲ್ಲಿ ಪತ್ತೆಯಾಗಿದೆ. ಕೋವಿಡ್ ವೇಳೆಯೇ ಐವರು ಮೃತ ಪಟ್ಟಿದ್ದರಾ ಎಂಬ ಅನುಮಾನ ಸಹ ಮೂಡಿದೆ. ಕೋವಿಡ್ ವೇಳೆ ಯಾರೂ ಬಾರದಂತಾಗಿ ಪ್ರಕರಣ ಮುಚ್ಚಿ ಹೋಗಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ.
ಒಂದು ಕೋಣೆಯಲ್ಲಿ ಜಗನ್ನಾಥ ರೆಡ್ಡಿ, ಪ್ರೇಮಕ್ಕ ಅಸ್ಥಿಪಂಜರ ಪತ್ತೆಯಾಗಿದ್ದು, ಇನ್ನೊಂದು ಕೋಣೆಯಲ್ಲಿ ಮಂಚದ ಮೇಲೆ ತ್ರಿವೇಣಿ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ಅಸ್ತಿಪಂಜರ ಪತ್ತೆಯಾಗಿದೆ.
ಆ ಐವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅಥವಾ ಯಾರಾದರೂ ಕೊಲೆ ಮಾಡಿರಬಹುದೇ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ತಿಳಿದು ಬಂದಿದೆ.
ಬುಧವಾರ ಯಾರೋ ಮನೆಯ ಬಾಗಿಲು ಒಡೆದಿದ್ದಾರೆ. ಹೀಗಾಗಿ, ನಾಯಿಗಳು ಮನೆ ಒಳಗೆ ಹೋಗಿ, ಅಲ್ಲಿದ್ದ ಅಸ್ಥಿಪಂಜರದ ತಲೆಬುರುಡೆಯನ್ನು ಹೊರತಂದು ಹಾಕಿವೆ. ಅದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
“ಆ ಮನೆಯಲ್ಲಿ 2019ರ ಕ್ಯಾಲೆಂಡರ್ ಸಿಕ್ಕಿದೆ. ಕೊರೋನಾ ಸಮಯದಲ್ಲಿ ಅವರು ಸಾವಿಗೀಡಾಗಿರುವ ಅನುಮಾನವಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
ಈ ವಿಷಯ ವರದಿಯಾಗುತ್ತಿದ್ದಂತೆ ನಿವಾಸದ ಬಳಿ ಸಂಬಂಧಿಕರು ಆಗಮಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಜಗನ್ನಾಥ ರೆಡ್ಡಿಯ ಸೋದರ ಸಂಬಂಧಿ ತಿಮ್ಮಾರೆಡ್ಡಿ ಅವರು, ನಾವಿಬ್ಬರು ಜೊತೆಗೆ ಓದುತ್ತಿದ್ದೇವು, ಜಗನ್ನಾಥ ರೆಡ್ಡಿ ಓದಿ ಇಂಜಿನಿಯರ್ ಆಗಿದ್ದ. ಅವರನ್ನು ಭೇಟಿಯಾಗಿ ಸುಮಾರು ಐದು ವರ್ಷವಾಯ್ತು ಎಂದರು.
ನಾನು ಬಂದಾಗ ಮಾತನಾಡಿಸುತ್ತಿದ್ದ. ಫೋನ್ ನಂಬರ್ ಕೂಡಾ ಕೊಟ್ಟಿರದ ಕಾರಣ ಅವರ ಜೊತೆ ಮಾತನಾಡಿಲ್ಲ. ಜಗನ್ನಾಥಗೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದರು. ಓರ್ವ ಪುತ್ರ ಇಂಜಿನಿಯರ, ಮತ್ತೋರ್ವ ವ್ಯವಸಾಯ ಮಾಡಿಕೊಂಡಿದ್ದನು ಎಂದು ಜಗನ್ನಾಥ ಕುಟುಂಬದ ಮಾಹಿತಿಯನ್ನು ನೀಡಿದರು.
ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ. ಊರಲ್ಲಿ ಜಮೀನು ಕೂಡಾ ತುಂಬಾನೇ ಇತ್ತು. ದೊಡ್ಡ ಸಿದ್ದವ್ವನಹಳ್ಳಿ ಪಕ್ಕದಲ್ಲೇ ಜಮೀನು ಕೂಡ ಇದೆ. ರಾತ್ರಿ ಈ ವಿಷಯ ಗೊತ್ತಾಯ್ತು, ಏನೂ ಆಗಿದೆ ಗೊತ್ತಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಇರುತ್ತಿದ್ದರು. ಒಮ್ಮೆ ಮನೆಯಲ್ಲಿ ವಾಸನೆ ಬರುತ್ತದೆ ಎಂದಿದ್ದರು. ಆ ಸಂದರ್ಭದಲ್ಲಿ ಯಾರೂ ಕೂಡಾ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ತಿಮ್ಮಾರೆಡ್ಡಿ ಹೇಳಿದರು.
ಜಗನ್ನಾಥ ರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಕೆಲ ವರ್ಷಗಳಿಂದ ಅವರ ಕುಟುಂಬ ಕಾಣಿಸಿರಲಿಲ್ಲ. ಅವರ ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರದ್ದೇ ಇರಬಹುದು. ಕೊರೋನಾ ಸಮಯದಲ್ಲಿ ಅವರು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಪವನ ಕುಮಾರ ಹೇಳಿದ್ದಾರೆ.