ಕೋಲಾರ: ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ದೇವರನ್ನು ಮುಟ್ಟಿದ್ದಕ್ಕೆ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ. ಬಾಲಕನ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆಯೂ ಮೇಲ್ಜಾತಿಯ ಕೆಲವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚೇತನ್ ಎಂಬ ಬಾಲಕನ ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಕಾರಣ ಗ್ರಾಮದಲ್ಲಿ ಗ್ರಾಮಸ್ಥರು ಭೂದೇವಿಯ ಉತ್ಸವ ಮಾಡುತ್ತಿದ್ದರು. ದಲಿತ ಕುಟುಂಬಕ್ಕೆ ಸೇರಿದ ಚೇತನ್ ಎಂಬ ಯುವಕ ಉತ್ಸವದ ವೇಳೆ ದೇವರನ್ನು ಮುಟ್ಟಿದ ಎಂಬ ಕಾರಣಕ್ಕೆ ಆ ಬಾಲಕನ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆ ಮೇಲ್ಜಾತಿಯ ಕೆಲವರಿಂದ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
60 ಸಾವಿರ ರೂ. ದಂಡ ಕಟ್ಟಿ ಇಲ್ಲವಾದಲ್ಲಿ ಗ್ರಾಮಕ್ಕೆ ಬರಬಾರದು ಎಂದು ಗ್ರಾಮದ ಮುಖಂಡರು ಬಾಲಕನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಹೊಸದಾಗಿ ಮಾಡಿದ್ದ ಉತ್ಸವ ಮೂರ್ತಿಯನ್ನು ಬಾಲಕ ಚೇತನ್ ತಲೆ ಮೇಲೆ ಹೊತ್ತುಕೊಳ್ಳಲು ಹೋದಾಗ ಗ್ರಾಮದ ಕೆಲವರು ಬೆದರಿಸಿ ಕಳಿಸಿದ್ದಾರೆ. ಇನ್ನು ದಲಿತ ಕುಟುಂಬಕ್ಕೆ ಸೇರಿರುವ ದಂಪತಿ ರಮೇಶ, ಶೋಭಾ ಹಾಗೂ ಮಗ ಚೇತನ್ ಅವರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು ಈ ಕುರಿತು ಇದು ವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ