ಗ್ಲ್ಯಾಂಡ್, (ಸ್ವಿಟ್ಜರಲ್ಯಾಂಡ್), 14- ಕಳೆದ 50 ವರ್ಷಗಳಲ್ಲಿ ವಿಶ್ವದಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ 69ರಷ್ಟು ಕುಸಿತವಾಗಿದೆ. ಮಾನವನ ವಿಪರೀತ ಚಟುವಟಿಕೆಯಿಂದ ಪ್ರಕೃತಿಗೆ ಆಗಿರುವ ವಿನಾಶಕಾರಿ ನಷ್ಟದ ಕುರಿತು ಬಿಡುಗಡೆಯಾದ ಡಬ್ಲ್ಯುಡಬ್ಲ್ಯುಎಫ್ ವರದಿ ತೋರಿಸಿದೆ.
32,000 ಜಾತೀಯ ಸಸ್ತನಿಗಳು, ಪಕ್ಷಿಗಳು, ಉಭಯಚರಗಳು, ಸರೀಸೃಪಗಳು ಮತ್ತು ಮೀನುಗಳ ಪೈಕಿ 5,000ಕ್ಕೂ ಹೆಚ್ಚು ಕ್ಷೀಣಿಸಿವೆ.ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಿರುವ ವೇಗವನ್ನು ಡಬ್ಲ್ಯುಡಬ್ಲ್ಯುಎಫ್ ಲಿವಿಂಗ್ ಪ್ಲಾನೆಟ್ ಸೂಚ್ಯಂಕವು ತೋರಿಸಿದೆ.
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಂತಹ ಜೀವವೈವಿಧ್ಯದಿಂದ ಕೂಡಿದ ಸಮೃದ್ಧ ಪ್ರದೇಶಗಳಲ್ಲಿ, ಪ್ರಾಣಿಗಳ ಸಂಖ್ಯೆಯ ನಷ್ಟದ ಅಂಕಿ ಅಂಶವು ಶೇ.94ರಷ್ಟಿದೆ.
ಉಷ್ಣವಲಯದ ಪ್ರದೇಶಗಳಲ್ಲಿ ವನ್ಯಜೀವಿ ಸಂಖ್ಯೆಯಲ್ಲಿ ವಿನಾಶಕಾರಿ ಕುಸಿತ ಆಗಿರುವುದನ್ನು ಈ ದತ್ತಾಂಶ ತೋರಿಸುತ್ತದೆ. ಇದು ಅತ್ಯಂತ ಚಿಂತೆಗೀಡು ಮಾಡಿರುವ ದತ್ತಾಂಶ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಟರ್ ನ್ಯಾಷನಲ್‌ನ ಮಹಾನಿರ್ದೇಶಕ ಮಾರ್ಕೊ ಲ್ಯಾಂಬರ್ಟಿನಿ ಹೇಳಿದ್ದಾರೆ.