ಬೆಳಗಾವಿ, ಅಕ್ಟೋಬರ 12- ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋದ ಆವರಣದಲ್ಲಿನ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಅಲ್ಲಿನ ಸಿಬ್ಬಂದಿ ಕಳೆದ ಮಹಾತ್ಮಾ ಗಾಂಧಿ ಜಯಂತಿ ದಿನದಂದು ಕಚೇರಿಯ ಹಿಂಬದಿಯ ಹಾಲ್ ನಲ್ಲಿ ಮಾಡಿದ್ದಾರೆನ್ನಲಾದ ಮದ್ಯಪಾನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಏಳು ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಅಮಾನತ್ತು ಮಾಡಿದೆ.
ಬೆಳಗಾವಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಗಾಂಧಿ ಜಯಂತಿಯ ದಿನದಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಿರುತ್ತದೆ. ಜಿಲ್ಲೆಯ ಜನರ ಆರೋಗ್ಯ ಕಾಪಾಡಬೇಕಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮದ್ಯದೊಂದಿಗೆ ಮಾಂಸದೂಟ ಕೂಡ ಮಾಡಿದ್ದಾರೆನ್ನಲಾಗಿದೆ. ಈ ವಿಷಯ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿ ವೈರಲ್ ಆಗಿತ್ತು.
ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೋಣಿಯವರ ಕಾರು ಚಾಲಕ ಮಂಜುನಾಥ ಪಾಟೀಲ ಮತ್ತು ಸಿಬ್ಬಂದಿ ಮಹೇಶ ಹಿರೇಮಠ, ಅನಿಲ ತಿಪ್ಪನ್ನವರ, ರಮೇಶ ನಾಯಕ, ಯಲ್ಲಪ್ಪ ಮುನವಳ್ಳಿ, ದೀಪಕ ಗಾವಡೆ ಸೇರಿ ಏಳು ಜನರನ್ನು ಅಮಾನತ್ತು ಮಾಡಲಾಗಿದೆ.
ಸರಕಾರಿ ಕಚೇರಿಯಲ್ಲಿ ಮದ್ಯಪಾನಗೋಷ್ಠಿ ನಡೆದಿರುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೋಣಿ ಅವರು ಒಪ್ಪಿಕೊಂಡಿದ್ದಾರೆ. ಆದರೆ ಅದು ಮಹಾತ್ಮಾ ಗಾಂಧಿ ಜಯಂತಿಯ ದಿನವಲ್ಲ, ಬದಲಾಗಿ ಏಳು ತಿಂಗಳ ಹಿಂದಿನದಾಗಿದೆ, ಆದರೂ ಈಗ ಬೆಳಕಿಗೆ ಬಂದಿದ್ದರಿಂದ ಪಾರ್ಟಿ ಮಾಡಿದವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಡಾ. ಕೋಣಿ ತಿಳಿಸಿದ್ದಾರೆ.