ಪಣಜಿ: ದೇಶದಲ್ಲಿ ಆಪರೇಷನ್ ಕಮಲ ಮತ್ತೆ ಕೆಲಸ ಮಾಡಿದೆ. ಗೋವಾದಲ್ಲಿ ಕಾಂಗ್ರೆಸ್ ಪಕ್ಷವು ಪಕ್ಷಾಂತರದ ಯತ್ನವನ್ನು ತಡೆದ ಎರಡು ತಿಂಗಳ ನಂತರವೂ ಸಹ ಇಂದು 11 ಶಾಸಕರಲ್ಲಿ ಎಂಟು ಮಂದಿ ಶಾಸಕರು ಬಿಜೆಪಿ ಸೇರಿದ್ದಾರೆ.
ಹಿರಿಯ ನಾಯಕರಾದ ದಿಗಂಬರ ಕಾಮತ್ ಮತ್ತು ಮಾಜಿ ಸಚಿವ, ಕಲಂಗೂಟ ಶಾಸಕ ಮೈಕೆಲ್ ಲೋಬೋ ನೇತೃತ್ವದಲ್ಲಿ ಈ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಭಾರತ ಜೋಡೋ ಯಾತ್ರೆಯ ನಡುವೆಯೇ ಗೋವಾದಲ್ಲಿನ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ ಸಮ್ಮುಖದಲ್ಲಿ ದಿಗಂಬರ ಕಾಮತ್, ಮೈಕಲ್ ಲೋಬೋ, ದೇಲಿಲಾ ಲೋಬೋ, ಸೇರಿದಂತೆ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಈಗ ಕೇವಲ 3 ಶಾಸಕರನ್ನು ಹೊಂದಿದ್ದು, ಬಿಜೆಪಿ ಸಂಖ್ಯೆ 28 ಕ್ಕೆ ಏರಿದೆ.
ಕಾಂಗ್ರೆಸ್ ನ ಎಲ್ಲಾ ಶಾಸಕರು ಪ್ರಧಾನಿ ಮೋದಿ ಅವರ ಕೈಗಳನ್ನು ಬಲಪಡಿಸಲು ಪ್ರಯತ್ನಿಸುತ್ತಾರೆ ಎಂದು ಲೋಬೋ ಬಿಜೆಪಿಗೆ ಸೇರುವ ಸಂದರ್ಭದಲ್ಲಿ ಹೇಳಿದರು.