ಹೊಸದಿಲ್ಲಿ, ೨೮/: ನೋಯ್ಡಾದ ಸೆಕ್ಟರ್ 93 ಎ ನಲ್ಲಿರುವ ಸೂಪರ್ ಟೆಕ್ ಟ್ವಿನ್ ಟಾವರ್ ನೆಲಸಮಗೊಂಡಿದೆ. ಭ್ರಷ್ಟಾಚಾರದಿಂದ ಹೊರಹೊಮ್ಮಿದ 103 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವನ್ನು ಜಲಪಾತದ ಇಂಪ್ಲೋಷನ್ ತಂತ್ರವನ್ನು ಬಳಸಿಕೊಂಡು ಕೇವಲ 9 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಯಿತು. ಇದನ್ನು ನಿರ್ಮಿಸಲು 9 ವರ್ಷಗಳು ಹಿಡಿದಿದ್ದವು.
ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದ ನೋಯ್ಡಾದ ಟ್ವಿನ್ ಟವರ್ ಅನ್ನು, ಸುಪ್ರೀಮ ಕೋರ್ಟ ಆದೇಶದಂತೆ ನೆಲಸಮಗೊಳಿಸಲಾಗಿದೆ.
ಇದು ಕುತುಬ್ ಮಿನಾರ್ ಗಿಂತ ಎತ್ತರವಾದ ಅವಳಿ ಗೋಪುರವಾಗಿತ್ತು. ಈ ಕಟ್ಟಡವನ್ನು 3,700 ಕಿಲೋ ಗ್ರಾಮಗಳಷ್ಟು ಸ್ಫೋಟಕ ಬಳಸಿ ಇಂದು ನೆಲಸಮ ಮಾಡಲಾಯಿತು.
ಅವಳಿ ಕಟ್ಟಡ ಉರುಳಿಸಲು ಕಾರಣಗಳೇನು?
ಎಮರಾಲ್ಡ್ ಕೋರ್ಟ ಸೊಸೈಟಿ ಆವರಣದಲ್ಲಿ ಸೂಪರ್ಟೆಕ್ ಕಂಪನಿ ನಿಯಮ ಬಾಹಿರವಾಗಿ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ನಿರ್ಮಾಣ ಮಾಡಿತ್ತು. ನಿಯಮ ಉಲ್ಲಂಘನೆಯಿಂದಾಗಿ ಈ ಕಟ್ಟಡಗಳನ್ನು ನೆಲಮಸ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಎಡಿಫೈಸ್ ಇಂಜಿನಿಯರ್ ಕಂಪನಿಯು ₹ 20 ಕೋಟಿ ಖರ್ಚಿನಲ್ಲಿ ಸುಮಾರು 3,700 ಕೆ.ಜಿ ಸ್ಫೋಟಕಗಳನ್ನು ಬಳಸಿ ಕಟ್ಟಡಗಳನ್ನು ನೆಲಸಮಗೊಳಿಸಿದೆ.
ಕಟ್ಟಡ ನಿರ್ಮಾಣದ ಮೂಲ ನಕ್ಷೆಯಲ್ಲಿ 14 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಕಂಪನಿಯು 40 ಮಹಡಿಗಳ ಕಟ್ಟಡ ನಿರ್ಮಾಣ ಮಾಡುವುದಲ್ಲದೆ, ಉದ್ಯಾನ ನಿರ್ಮಾಣದ ಸ್ಥಳದಲ್ಲಿ ಈ ಅವಳಿ ಕಟ್ಟಡಗಳನ್ನು ನಿರ್ಮಿಸಿತ್ತು.
2012ರಲ್ಲಿ ಸ್ಥಳೀಯ ನಿವಾಸಿಗಳು ಕಾನೂನುಬಾಹಿರವಾಗಿ ಈ ಅವಳಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ 2014ರಲ್ಲಿ ನ್ಯಾಯಾಲಯ ನಿವಾಸಿಗಳ ಪರವಾಗಿ ತೀರ್ಪು ನೀಡಿತು. 4 ತಿಂಗಳ ಒಳಗಾಗಿ ಕಂಪನಿಯು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ಆದೇಶ ನೀಡಿತ್ತು.
ಅಲಹಾಬಾದ ಹೈಕೋರ್ಟ ತೀರ್ಪನ್ನು ವಿರೋಧಿಸಿ ಫ್ಲಾಟ್ ಖರೀದಿದಾರರು ಮತ್ತು ಕಂಪನಿಯು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅಂತಿಮವಾಗಿ ಸುಪ್ರೀಮ ಕೋರ್ಟ ಕೂಡ ಅಲಹಾಬಾದ್ ಹೈಕೋರ್ಟ ತೀರ್ಪನ್ನು ಎತ್ತಿ ಹಿಡಿದು, ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶಿಸಿತ್ತು.