ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 36 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ 104 ವರ್ಷದ ವೃದ್ಧ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ.
1988ರಲ್ಲಿ ಭೂ ವಿವಾದ ಪ್ರಕರಣದಲ್ಲಿ ಸಹೋದರನನ್ನು ಹತ್ಯೆ ಮಾಡಿದ ಆರೋಪದ ಮೇಲೆ ರಸಿಕ್ತ ಮೊಂಡಲ್ ಎಂಬವನಿಗೆ 36 ವರ್ಷಗಳ ಹಿಂದೆ ಬಂಧಿಸಿ ಶಿಕ್ಷೆ ವಿಧಿಸಲಾಗಿತ್ತು.
ಸುಮಾರು ಒಂದು ವರ್ಷ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಜಾಮೀನು ಅವಧಿ ಮುಗಿದ ನಂತರ ಮತ್ತೆ ಜೈಲಿಗೆ ಮರಳಬೇಕಾಗಿತ್ತು. ಸೆಷನ್ ಮತ್ತು ಹೈಕೋರ್ಟ ಬಿಡುಗಡೆಗಾಗಿ ಅವರ ಮನವಿಯನ್ನು ತಿರಸ್ಕರಿಸಿತ್ತು.ಈಗ ಸುಪ್ರೀಮ ಕೋರ್ಟ ಆದೇಶದ ಮೇರೆಗೆ ಶತಾಯುಷಿಯನ್ನು ಬಿಡುಗಡೆ ಮಾಡಲಾಗಿದೆ.
ಮಾಲ್ಡಾ ಜಿಲ್ಲೆಯ ಮಾಣಿಕಚಾಕನ ನಿವಾಸಿ ಮೊಂಡಲ್ ಅವರು ಮಂಗಳವಾರ ಮಾಲ್ಡಾ ಕರೆಕ್ಷನಲ್ ಹೋಮ್ ಗೇಟ್‌ನಿಂದ ಹೊರಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿ, ”ನಾನಿನ್ನು ತೋಟಗಾರಿಕೆ ಮಾಡುತ್ತೇನೆ, ಕುಟುಂಬ ಸದಸ್ಯರೊಂದಿಗೆ ಪೂರ್ಣ ಸಮಯವನ್ನು ಕಳೆಯುತ್ತೇನೆ ಎಂದು ಉತ್ಸಾಹದ ಮಾತುಗಳನ್ನಾಡಿದ್ದಾರೆ.
“ನಾನು ಎಷ್ಟು ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಎಂದು ನನಗೆ ನೆನಪಿಲ್ಲ. ಇದು ಎಂದಿಗೋ ಮುಗಿಯದಂತಿತ್ತು. ನನ್ನನ್ನು ಯಾವಾಗ ಇಲ್ಲಿಗೆ ಕರೆತಂದರು ಎಂಬುದು ನನಗೆ ನೆನಪಿಲ್ಲ” ಎಂದು ಮೊಂಡಲ್ ಹೇಳಿದ್ದಾರೆ. “ಈಗ ನಾನು ಹೊರಬಂದಿದ್ದೇನೆ. ನನ್ನ ಉತ್ಸಾಹಕ್ಕೆ ನಾನು ನ್ಯಾಯವನ್ನು ನೀಡಬಲ್ಲೆ. ನನ್ನ ಅಂಗಳದಲ್ಲಿರುವ ಸಣ್ಣ ಉದ್ಯಾನದಲ್ಲಿ ಸಸ್ಯಗಳನ್ನು ಬೆಳೆಸುತ್ತೇನೆ. ನಾನು ನನ್ನ ಕುಟುಂಬ ಮತ್ತು ಮೊಮ್ಮಕ್ಕಳೊಂದಿಗೆ ಇರಬೇಕಾದ ಸಮಯ ಕಳೆದುಕೊಂಡೆ. ಇನ್ನು ಅವರೊಂದಿಗೆ ಇರಲು ಬಯಸುತ್ತೇನೆ” ಎಂದಿದ್ದಾರೆ.
ಮೊಂಡಲ್ ಅವರ ಬಳಿ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದಾಗ, 108 ವರ್ಷಗಳು ಎಂದರು. ಆದರೆ ಅವರ ಪುತ್ರ, 104 ಎಂದು ಸರಿಪಡಿಸಿದರು. ದಾಖಲೆಗಳು 104 ಎಂದು ತೋರಿಸಿವೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಮ ಕೋರ್ಟ ಆದೇಶದ ಮೇರೆಗೆ ತನ್ನ ತಂದೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮೊಂಡಲ್ ಅವರ ಪುತ್ರ ಹೇಳಿದ್ದಾರೆ.
“ಕೆಲವು ವರ್ಷಗಳ ನಂತರ, ಸೆರೆವಾಸದ ಸಮಯದಲ್ಲಿ ಯಾವುದೇ ಅಸಮರ್ಪಕ ಕೃತ್ಯವನ್ನು ಮಾಡದಿದ್ದಲ್ಲಿ ಪ್ರತಿಯೊಬ್ಬ ಕೈದಿಯೂ ಜೈಲಿನಿಂದ ಬಿಡುಗಡೆಗೆ ಅರ್ಹನಾಗಿರುತ್ತಾನೆ. ಅಂತಿಮವಾಗಿ ಅವರ ಬಿಡುಗಡೆಗೆ ಸುಪ್ರೀಮ ಕೋರ್ಟ ದಾರಿ ಮಾಡಿಕೊಟ್ಟಿರುವುದು ಸಂತಸ ತಂದಿದೆ,” ಎಂದು ಪುತ್ರ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಜೈಲುಗಳಲ್ಲಿ ಬಂಧಿಯಾಗಿರುವ ಶತಾಯುಷಿ ಕೈದಿಗಳ ಕೆಲವೇ ಪ್ರಕರಣಗಳಲ್ಲಿ ಇವರದ್ದೂ ಒಂದು ಎಂದು ಸುಧಾರಣಾ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.