ಮುಂಬೈ: ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ 13 ವರ್ಷದ ಬಾಲಕಿಯ ಹೊಟ್ಟೆಯಲ್ಲಿ 1.2 ಕೆಜಿ ತೂಕದ ಕೂದಲಿನ ಉಂಡೆ ಕಂಡು ಬಂದಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಊಟ ತಿನ್ನಲು, ನೀರು ಕುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ವಸಾಯಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ, ಬಾಲಕಿಗೆ ರಾಪುಂಜೆಲ್ ಸಿಂಡ್ರೋಮ್ ಇದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಶಸ್ತ್ರಚಿಕಿತ್ಸೆಯ ಮೂಲಕ 1.2 ಕೆಜಿ ತೂಕದ 32 ಇಂಚು ಉದ್ದದ ಕೂಡಲಿನ ಉಂಡೆಯನ್ನು ಹೊರ ತೆಗೆದಿದ್ದಾರೆ.
ರಾಪುಂಜೆಲ್ ಸಿಂಡ್ರೋಮ್ ಎಂದರೆ ಕೆಲವು ಚಿಕ್ಕ ವಯಸ್ಸಿನ ಹುಡುಗಿಯರು ಇನ್ನೊಬ್ಬರ ತಲೆ ಕೂದಲನ್ನು ತಿನ್ನುವ ಹವ್ಯಾಸ ಮಾಡಿಕೊಂಡಿರುತ್ತಾರೆ. ಈ ಮಕ್ಕಳು ಅರಿವಿಲ್ಲದೇ ನುಂಗುವ ಮೊದಲು ಕೂದಲನ್ನು ಅಗಿಯುತ್ತಾರೆ. ಇದು ಮಾನಸಿಕ ಅಸ್ವಸ್ಥತೆ ಎಂದು ಹೇಳಬಹುದು. ಮನುಷ್ಯನ ಕೂದಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಕರುಳಿನ ನೋವು ಉಂಟಾಗುತ್ತದೆ ಎಂದಿದ್ದಾರೆ.