ಬೆಳಗಾವಿ(ಸಮದರ್ಶಿ ಸುದ್ದಿ), ೨೪- ಕೌಟುಂಬಿಕ ಜೀವನದಲ್ಲಾದ ಅನಿರೀಕ್ಷಿತ ಬದಲಾವಣೆ, ತಿರುವುಗಳಿಂದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಬೆಳಗಾವಿಯ ವಾಣಿಜ್ಯ ಪದವೀಧರೆ ತರುಣಿಯೊಬ್ಬರು ತಮ್ಮ ಮೊದಲ ಯತ್ನದಲ್ಲೇ ಅಪ್ರತಿಮ ಯಶಸ್ಸು ಪಡೆದಿದ್ದಾರೆ. ಕೃಷಿ ಪ್ರಾರಂಭ ಮಾಡಿದ ಮೊದಲನೇ ತಿಂಗಳಲ್ಲೇ 8 ಲಕ್ಷ ರೂಪಾಯಿ ಆದಾಯ ಗಳಿಸಿ ಭೂಮಿಯ ಉತ್ಪನ್ನವೇ ಬೇರೆಲ್ಲ ಆದಾಯಕ್ಕಿಂತ ಶ್ರೇಷ್ಠ ಹೆಚ್ಚು ಎಂದು ಸಾಬೀತು ಪಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ನಿಖಿತಾ ಎಂಬಾಕೆ ವಾಣಿಜ್ಯ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಡೆದು ಚಾರ್ಟರ್ಡ ಅಕೌಂಟಂಟ್ ಕೋರ್ಸಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಾಲ್ಕು ಸದಸ್ಯ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ ಅವರ ತಂದೆ ವೈಜು ಪಾಟೀಲ ಅವರು ಯಾವುದೋ ಕಾರಣದಿಂದ ಕಳೆದ ವರ್ಷ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ತಾಯಿ ಅಂಜನಾ, ಸಹೋದರ ಅಭಿಷೇಕ ಅವರನ್ನು ಸಲಹುವ ಹೊಣೆಗಾರಿಕೆ ನಿಖಿತಾ ಅವರ ಮೇಲೆ ಬಂದಿತು.
ಸಿಎ ಆಗುವ ಕನಸು ತ್ಯಜಿಸಿ ತಮ್ಮದೇ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡುವ ಕುರಿತು ಆಕೆ ನಿರ್ಧಾರ ಮಾಡಿದರು. ಹಾಗಾಗಿ ಯಾವ ಬೆಳೆ ಬೆಳೆದರೆ ಹೆಚ್ಚು ಲಾಭ, ಹಾನಿ ಪ್ರಮಾಣ ಕಡಿಮೆ, ಸಮೀಪದಲ್ಲಿಯ ಮಾರುಕಟ್ಟೆ ಮುಂತಾದ ವಿಷಯ ಅಭ್ಯಸಿಸಿ ಕಡಿಮೆ ಅವಧಿಯಲ್ಲಿ ಫಲ ದೊರೆಯುವ ಉತ್ಪನ್ನಗಳನ್ನು ಬೆಳೆಯಲು ನಿರ್ಧರಿಸಿದರು. ಮೊದಲು ನಾಲ್ಕೂ ಎಕರೆ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಂಡರು. ಹೆಚ್ಚು ಅವಧಿಯ ಕಬ್ಬು, ಗೋಧಿ, ಜೋಳ, ಅಕ್ಕಿ ಮುಂತಾದ ಬೆಳೆಗಳಿಗೆ ರಿಸ್ಕ ಹೆಚ್ಚು, ಮಾರಾಟ ಮಾಡಿದ ನಂತರ ಹಣ ಬರುವದೂ ತಡವಾಗುವದೆಂದು ಅವರು ತೋಟಗಾರಿಕೆ ಉತ್ಪನ್ನ ಬೆಳೆಯಲು ನಿರ್ಧರಿಸಿದರು.
ಬೆಳಗಾವಿ ತಾಲೂಕಿನಲ್ಲಿ ಹೆಚ್ಚು ರೈತರು ತೋಟಗಾರಿಕೆ ಬೆಳೆಗಳಾದ ತರಕಾರಿಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಹದಿನೈದು-ಇಪ್ಪತ್ತು ದಿನಗಳಲ್ಲಿ ಬೆಳೆ ಬರುವುದರಿಂದ ಹಣವೂ ಬೇಗ ಬರುತ್ತದೆ, ರಿಸ್ಕ ಕೂಡ ಕಡಿಮೆ. ಅಲ್ಲದೇ ಎಲ್ಲಕ್ಕಿಂತ ತರಕಾರಿಗಳಿಗೆ ಹೆಚ್ಚು ಮಾರುಕಟ್ಟೆ ಮತ್ತು ಯಾವಾಗಲೂ ಬೇಡಿಕೆಯಿರುವುದರಿಂದ ತರಕಾರಿಗಳನ್ನೇ ಇಲ್ಲಿ ಬೆಳೆಯುತ್ತಾರೆ. ಇಲ್ಲಿನ ತರಕಾರಿಗಳಿಗೆ ನೆರೆಯ ಮಹಾರಾಷ್ಟ್ರ, ಗೋವಾ, ಗುಜರಾತ್ ಗಳಲ್ಲದೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಹ ಬೇಡಿಕೆಯಿದೆ.
ತರಕಾರಿ ಬೆಳೆಯುವದಕ್ಕೂ ಮೊದಲು ಮೆಣಸಿನಕಾಯಿ ಬೆಳೆದರೆ ಹೇಗೆ ಎಂದು ಯೋಚಿಸಿ ನಿಖಿತಾ ಅವರು ಲಭ್ಯವಿರುವ ಕರ್ನಾಟಕದ ಪ್ರಸಿದ್ದ ಬ್ಯಾಡಗಿ ತಳಿ ಸೇರಿದಂತೆ ಉತ್ತಮ ತಳಿಗಳು ಯಾವವು ಮತ್ತು ಅವುಗಳಿಗಿರುವ ಬೇಡಿಕೆ ಮುಂತಾದವುಗಳ ಬಗ್ಗೆ ಅಭ್ಯಾಸ ಮಾಡಿ, ನಾಲ್ಕು ಎಕರೆ ಜಮೀನಿನಲ್ಲಿ ಒಂದು ಎಕರೆಯನ್ನು ಆಯ್ದುಕೊಂಡು ಅದನ್ನು ಮೂರು ಭಾಗವಾಗಿ ವಿಂಗಡಿಸಿ ಮೊದಲು ಒಂದು ಭಾಗದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದರು. ಬೀಜ ಸಸಿಯಾದಾಗ ಇನ್ನೊಂದು ಭಾಗದಲ್ಲಿ ಬಿತ್ತನೆ ಮಾಡಿದರು, ನಂತರ ಅದರಂತೆ ಮೂರನೇ ಭಾಗದಲ್ಲೂ ಬಿತ್ತನೆ ಮಾಡಿದರು.
10-12 ದಿನಗಳಿಗೊಮ್ಮೆ ಮೆಣಸಿನಕಾಯಿ ಬೆಳೆ ಬರುವುದರಿಂದ ಮೊದಲ ಭಾಗದಲ್ಲಿ ಬಿತ್ತಿದ್ದ ಬೆಳೆಯಿಂದ ಸುಮಾರು 1.30 ಟನ್ ಉತ್ಪನ್ನ ಪಡೆದರು. ಮರು ವಾರ ಎರಡನೇ ಭಾಗ ನಂತರ ಮೂರನೇ ಭಾಗದಿಂದಲೂ ಅಷ್ಟೇ ಬೆಳೆ ಪಡೆದರು. ಸದ್ಯದ ಮಾರುಕಟ್ಟೆಯಲ್ಲಿ ಒಂದು ಕೆಜಿ ಮೆಣಸಿನಕಾಯಿಗೆ 50 ರೂಪಾಯಿ ಇರುವುದರಿಂದ ಅವರು ತಾವು ಒಂದು ಎಕರೆಯಲ್ಲಿ 4 ಟನ್ ಮೆಣಸಿನಕಾಯಿಯಂತೆ ಒಟ್ಟು ನಾಲ್ಕು ಎಕರೆಯಲ್ಲಿ ಎಂಟು ಲಕ್ಷ ರೂಪಾಯಿ ಗಳಿಸಿದ್ದಾರೆ. ನಿಖಿತಾ ತಮ್ಮ ಹೊಲದಲ್ಲಿ ವಾರಕ್ಕೊಮ್ಮೆ ಕೆಲಸ ಮಾಡುವ 8-10 ಮಹಿಳೆಯರಿಗೆ ಬೇರೆ ಕಡೆ ದೊರೆಯುವ ಕೂಲಿಗಿಂತ ಹೆಚ್ಚು ಕೂಲಿ ಕೊಡುತ್ತಾರೆ.
“ಅನಿವಾರ್ಯವಾಗಿ ಈ ಕ್ಷೇತ್ರಕ್ಕೆ ಬಂದೆ. ತಮ್ಮದು ಕೃಷಿ ಪ್ರಧಾನ ಕುಟುಂಬವಾಗಿದ್ದರಿಂದ ನನಗೆ ಅಷ್ಟೇನೂ ಕಷ್ಟವಾಗಲಿಲ್ಲ. ಆದರೆ ಎಲ್ಲವನ್ನೂ ಯೋಚಿಸಿ ಮಾಡಿದ್ದರಿಂದ ಯೋಜಿಸಿದಂತೆ ಎಲ್ಲವೂ ಜರುಗಿದೆ. ಮೊದಲ ತಿಂಗಳಲ್ಲೇ 8 ಲಕ್ಷ ರೂಪಾಯಿ ಗಳಿಸಿದ್ದು ಉತ್ಸಾಹ ಹೆಚ್ಚಿಸಿದೆ” ಎಂದು ಸಮದರ್ಶಿಗೆ ನಿಖಿತಾ ತಿಳಿಸಿದರು.
ದೀರ್ಘ ಅವಧಿಯ ಬೆಳೆ ಬೆಳೆಯುವದರಲ್ಲಿ ರಿಸ್ಕ ಹೆಚ್ಚು. ಬರ, ಪ್ರವಾಹ, ಅತಿವೃಷ್ಟಿ ಮುಂತಾದವುಗಳಿಂದ ಬೆಳೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚು, ಹಾಗಾಗಿ ಕಡಿಮೆ ಅವಧಿಯಲ್ಲಿ ಉತ್ಪನ್ನ ಬರುವ ಬೆಳೆ ಬೆಳೆಯುವುದೇ ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾರ್ಪಡಿಸಿ ಅದರಲ್ಲಿ ಚಿನ್ನದ ಬೆಳೆ ಬೆಳೆಯುವ ಕುರಿತ ಡಾ. ರಾಜಕುಮಾರ ಅವರ “ಬಂಗಾರದ ಮನುಷ್ಯ” ಕನ್ನಡ ಚಲನಚಿತ್ರದ “ಮನಸೊಂದಿದ್ದರೆ ಮಾರ್ಗ” ಹಾಡಿನಂತೆ ಜಾಫರವಾಡಿಯ ನಿಖಿತಾ ಮಾಡಿ ತೋರಿಸಿದ್ದಾರೆ. ಮುಂದೆಯೂ ಅವರಿಗೆ ಯಶಸ್ಸು ದೊರೆಯಲಿ ಎಂಬ ಹಾರೈಕೆ.