ವಿಜಯಪುರ, ಮೇ 15: ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ನಗರದ ಸಿದ್ಧೇಶ್ವರ ಬಡಾವಣೆಯ ಮನೆಯಲ್ಲಿ ಮಂಗಳವಾರ ರಾತ್ರಿ ಮನೋಜಕುಮಾರ ಪೋಳ (30) ಹಾಗೂ ರಾಖಿ (23) ಎಂಬವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ.
ಮನೋಜ ಹಾಗೂ ರಾಖಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮನೋಜ ತಾಯಿ ಭಾರತಿ ತಮ್ಮ ಮಗಳ ಊರಿಗೆ ಹೋಗಿದ್ದರು. ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ನವದಂಪತಿ ಸೀರೆಯಿಂದ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಬುಧವಾರ ಬೆಳಗ್ಗೆ ಭಾರತಿ ಮನೆಗೆ ಬಂದಾಗ ಮಗ-ಸೊಸೆ ಇಬ್ವರೂ ನೇಣಿಗೆ ಶರಣಾದ ಘಟನೆ ಕಂಡು ಕಂಗಾಲಾಗಿದ್ದಾರೆ. ನವದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದ ಜಲನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.