ತಿರುವನಂತಪುರಂ: ದೀರ್ಘ ಕಾಲ ಯೌವನ, ಹೆಚ್ಚಿನ ಆಯುಷ್ಯಕ್ಕಾಗಿ ಮತ್ತು ಶ್ರೀಮಂತರಾಗುತ್ತೇವೆ ಮೂಢನಂಬಿಕೆಯಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ ಗ್ರಾಮದಲ್ಲಿ ಮಾಟಮಂತ್ರ ಮಾಡಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟು ಸ್ವಲ್ಪ ಮಾಂಸ ತಿಂದು ನಂತರ ಅವರ ದೇಹದ ಭಾಗಗಳನ್ನು ತುಂಡು ತುಂಡು ಮಾಡಿ ಹೂತಿಟ್ಟ ಪ್ರಕರಣದ ಬೆಳಕಿಗೆ ಬಂದಿದೆ.
ಈ ಸಂಬಂಧ ಗಂಡ-ಹೆಂಡತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಮಸಾಜ್ ಥೆರಪಿಸ್ಟ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಎಂದು ಗುರುತಿಸಲಾಗಿದೆ. ಮತ್ತೊಬ್ಬ ರಶೀದ ಅಲಿಯಾಸ ಮಹಮ್ಮದ ಶಫಿ ಈ ಪ್ರಕರಣದ ಮಾಸ್ಟರ್ ಮೈಂಡ ಎಂದು ಹೇಳಲಾಗಿದ್ದು, ಆತನನ್ನೂ ಸಹ ಬಂಧಿಸಲಾಗಿದೆ.
ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ ನ್ಯಾಯಾಲಯವು ಮೂವೂ ಆರೋಪಿಗಳನ್ನು ಅಕ್ಟೋಬರ 26 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪದ್ಮಾ ಮತ್ತು ರೋಸ್ಲಿನ ಎಂಬವರು ಮಾಟಮಂತ್ರದ ಕಾರಣ ನರಬಲಿಗೆ ಬಲಿಯಾದ ದುರ್ದೈವಿಗಳು. ಇವರು ರಸ್ತೆಗಳಲ್ಲಿ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡಿ ಜೀವನ ಮಾಡುವವರಾಗಿದ್ದರು. ಮಸಾಜ್ ಥೆರಪಿಸ್ಟ ಭಗವಲ್ ಸಿಂಗ ಎದುರು ಆತನ ಪತ್ನಿ ಲೈಲಾ ದಂಪತಿಗಳು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಅವರ ಜೀವನದಲ್ಲಿ ಸಮೃದ್ಧಿ ಹೊಂದಲು, ಸದಾ ಯೌವನದಿಂದಿರಲು ಈ ಇಬ್ಬರು ಮಹಿಳೆಯರನ್ನು ಅಪಹರಿಸಿ ನರಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಪತ್ತನಂತಿಟ್ಟ ಗ್ರಾಮದ ದಂಪತಿ ಮನೆಯ ಆವರಣದಿಂದ ಮೃತರನ್ನು ಕತ್ತರಿಸಿ ತುಂಡುತುಂಡು ಮಾಡಿ ಹೂತಿಟ್ಟ ದೇಹದ ಭಾಗಗಳನ್ನು ಹೊರತೆಗೆಯಲಾಯಿತು. ಮಾನವ ದೇಹದ ಭಾಗಗಳನ್ನು ಬೇಯಿಸಿ ತಿಂದರೆ ತಮ್ಮ ಯೌವನ ಕಾಪಾಡಿಕೊಳ್ಳಬಹುದು ಎಂದು ದಂಪತಿಗಳಿಗೆ ರಶೀದ ಅಲಿಯಾಸ್ ಮಹಮ್ಮದ ಶಫಿ ಹೇಳಿದ್ದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಾಟಮಂತ್ರದ ಭಾಗವಾಗಿ ನರಬಲಿ ಕೃತ್ಯದ ನಂತರ ಹತ್ಯೆಗೀಡಾದ ಇಬ್ಬರು ಮಹಿಳೆಯರ ಮಾಂಸವನ್ನು ತಿಂದಿರುವುದಾಗಿ ಲೈಲಾ ಹೇಳಿದ್ದಾಳೆ.
ಬಲಿಯಾದ ಮಹಿಳೆ ರೋಸ್ಲಿನ ಅವರ ದೇಹದ ಮುಂಭಾಗದ ಪಕ್ಕೆಲುಬಿನ ಮಾಂಸವನ್ನು ಕತ್ತರಿಸಲಾಯಿತು. ನರಬಲಿಯ ಮಾಸ್ಟರ್ಮೈಂಡ್ ಆಗಿದ್ದ ಶಫಿಯು ಮಾನವ ದೇಹದ ಅಂಗಾಂಗಗಳನ್ನು ಬೇಯಿಸಿ ತಿಂದರೆ ಯೌವನ ಕಾಪಾಡುತ್ತದೆ ಎಂದು ಭಗವಲ ಸಿಂಗ ಮತ್ತು ಲೈಲಾ ಅವರಿಗೆ ಸಲಹೆ ನೀಡಿದ್ದನಂತೆ.
ಪೊಲೀಸರ ಪ್ರಕಾರ, ಮೃತ ಇಬ್ಬರೂ ಮಹಿಳೆಯರು ಸುಮಾರು 50 ವರ್ಷದ ಆಸುಪಾಸಿನವರು ಎಂದು ಹೇಳಲಾಗಿದ್ದು, ಕೊಚ್ಚಿಯ ಕಡವಂತರಾ ಮತ್ತು ಸಮೀಪದ ಕಾಲಡಿ ನಿವಾಸಿಗಳು.
ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ಮಹಿಳೆಯರು ನಾಪತ್ತೆಯಾಗಿದ್ದರು ಮತ್ತು ಅವರ ಮೊಬೈಲ್ ಫೋನ್ ವಿವರಗಳು ಮತ್ತು ಟವರ್ ಸ್ಥಳಗಳನ್ನು ಆಧರಿಸಿ ಅಂತಿಮವಾಗಿ ತನಿಖೆಯು ನರಬಲಿಯ ಕಥೆಯನ್ನು ಬಿಚ್ಚಿಟ್ಟಿಡುವಂತೆ ಮಾಡಿದೆ.
ನಾಪತ್ತೆಯಾದ ಮೊದಲ ಮಹಿಳೆ ಕಾಲಡಿ ಮೂಲದವರಾಗಿದ್ದು, ಕೆಲವು ಸಮಯದಿಂದ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದರು ಮತ್ತು ಅಗಸ್ಟ 17 ರಂದು ಅವರ ಮಗಳು ಕಾಣೆಯಾದ ದೂರನ್ನು ದಾಖಲಿಸಿದ್ದರು.
ತಮಿಳುನಾಡಿನ ಧರ್ಮಪುರಿ ಮೂಲದ ಮತ್ತೋರ್ವ ಮಹಿಳೆ ಅಗಸ್ಟ 17 ರಂದು ನಾಪತ್ತೆಯಾಗಿದ್ದಳು ಎಂದು ಆಕೆಯ ಸಹೋದರಿ ದೂರು ನೀಡಿದ್ದರು. ಎಳಂಥೂರಿನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮಾ ಅವರ ಮೃತದೇಹವನ್ನು ಎಳಂತೂರು ನಿವಾಸಿ ಬೇಬಿ ಎಂಬವರು ಹೂಳಿದ್ದಾರೆ. ನರಬಲಿಗಾಗಿ ತನ್ನ ಪತ್ನಿ ಲೈಲಾಳೊಂದಿಗೆ ಬಂಧಿಸಲ್ಪಟ್ಟ ಪಾರಂಪರಿಕ ವೈದ್ಯರಾದ ಭಗವಲ ಸಿಂಗ್, ಕಸವನ್ನು ಸಂಗ್ರಹಿಸಲು ಹೊಂಡವನ್ನು ಅಗೆಯುವಂತೆ ಬೇಬಿಗೆ ಸೂಚಿಸಿದ್ದರು.
ನಾಲ್ಕು ಅಡಿ ಅಗಲಕ್ಕೆ ಹೊಂಡ ತೋಡಬೇಕು ಎಂದು ಬೇಬಿಗೆ ಭಗವಲ್ ಹೇಳಿ ಸಾವಿರ ರೂಪಾಯಿಗಳನ್ನು ನೀಡಿದ್ದನು. ಎರಡು ದಿನಗಳಲ್ಲಿ ಗುಂಡಿ ತೋಡಲಾಗಿದೆ. ಅವರು ಮತ್ತು ಇತರ ಕಾರ್ಮಿಕರು ಗುಂಡಿ ಅಗೆಯಲು ಬಂದಾಗ ಭಗವಲ್ ಮತ್ತು ಲೈಲಾ ಮಾತ್ರ ಮನೆಯಲ್ಲಿದ್ದರು ಎಂದು ಬೇಬಿ ಹೇಳಿದ್ದಾರೆ.
ಇಬ್ಬರು ಸಂತ್ರಸ್ತರನ್ನು ಎಳಂತೂರಿಗೆ ಕರೆದೊಯ್ದ ಮೊಹಮ್ಮದ ಶಫಿಗೆ ಮಹಿಳೆ ಪದ್ಮಾ ಅವರನ್ನು ಕರೆತರಲು 1.5 ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಹೇಳಲಾಗಿತ್ತು ಹಾಗೂ ಮುಂಗಡವಾಗಿ 15,000 ರೂ.ಗಳನ್ನು ನೀಡಲಾಗಿತ್ತು. ರೋಸ್ಲಿನ ಅವರನ್ನು ಕರೆತರಲು ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
ಭಗವಲ್ ಸಿಂಗನನ್ನು ಬಲೆಗೆ ಬೀಳಿಸಲು ಶಫಿ ತನ್ನ ಪತ್ನಿಯ ಫೋನ್ನಲ್ಲಿ ಶ್ರೀದೇವಿ ಹೆಸರಿನಲ್ಲಿ ನಕಲಿ ಫೇಸಬುಕ್ ಪ್ರೊಫೈಲ್ ಅನ್ನು ರಚಿಸಿದ್ದ. ಹೈಕು ಕವಿಯೂ ಆಗಿರುವ ಭಗವಲ್ ಜೊತೆ ಆತ್ಮೀಯತೆ ಬೆಳೆಸಿಕೊಂಡ ಶಫಿ ಫೇಸಬುಕ್ ಪ್ರೊಫೈಲ್ ಡಿಲೀಟ್ ಮಾಡಿದ್ದಾನೆ. ಪೊಲೀಸರು ಈಗ ಪ್ರೊಫೈಲ್ ಅನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಶಫಿ ವಿರುದ್ಧ ಇದುವರೆಗೆ ಎಂಟು ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳಲ್ಲಿ ಅತ್ಯಾಚಾರ ಪ್ರಕರಣವೂ ಸೇರಿದೆ. ಪೊಲೀಸರ ಪ್ರಕಾರ, ಶಫಿ ಕೂಡ ಕೊಚ್ಚಿ ನಗರದ ಅನೈತಿಕ ಚಟುವಟಿಕೆಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೃತ ಮಹಿಳೆಯರ ಅವಶೇಷಗಳ ಶವಪರೀಕ್ಷೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಎರಡು ಶವಗಳನ್ನು ನಾಲ್ಕು ಗುಂಡಿಗಳಲ್ಲಿ ಹೂಳಲಾಯಿತು. ಮನೆಯೊಳಗೆ ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದೂ ಸಹ ಡಿಐಜಿ ತಿಳಿಸಿದ್ದಾರೆ.
ಅಪರಾಧದ ವಿವರಗಳನ್ನು ನೀಡಿದ ಡಿಐಜಿ ನಿಶಾಂತಿನಿ ಅವರು, ಮೊದಲ ದೇಹವನ್ನು 56 ತುಂಡುಗಳಾಗಿ ಕತ್ತರಿಸಿದ್ದರೇ ಎರಡನೆಯದನ್ನು ಐದು ತುಂಡುಗಳಾಗಿ ಕತ್ತರಿಸಲಾಯಿತು. ಎರಡನೇ ಮೃತದೇಹದೊಂದಿಗೆ ಸಿಂಧೂರದಿಂದ ಹೊದಿಸಿದ ಚೀಲ ಮತ್ತು ಕಲ್ಲು ಪತ್ತೆಯಾಗಿದೆ. ಜೂನ್ 8 ರಿಂದ ಸೆಪ್ಟೆಂಬರ್ 26 ರ ನಡುವೆ ಸಂಜೆ 5 ರಿಂದ 6 ರವರೆಗೆ ನರಬಲಿಗಳು ನಡೆದಿವೆ. ದಂಪತಿ ಈ ಮಹಿಳೆಯರನ್ನು ನರಬಲಿ ನೀಡಿ ನಂತರ ಮಾಂಸವನ್ನು ತಿಂದಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.