(ಸ್ವಾತಂತ್ರೋತ್ಸವ ವಿಶೇಷ)
ಧಾರವಾಡ, ೯– ನೇಕಾರಿಕೆಯನ್ನೇ ಉದ್ಯೋಗ ಮಾಡಿಕೊಂಡು ಅದರೊಂದಿಗೆ ರಾಷ್ಟ್ರದ ಹೆಮ್ಮೆಯ ಧ್ವಜ ತಯಾರಿಕೆಗೆ ಐದು ದಶಕಗಳ ಕಾಲ ಬಟ್ಟೆ ನೇಯ್ದು ಕೊಡುತ್ತಾ ಬಂದಿದ್ದ ಧಾರವಾಡ ಜಿಲ್ಲೆಯ ಗರಗ ಪಟ್ಟಣದ “ಕ್ಷೇತ್ರೀಯ ಸೇವಾ ಸಂಘ“ದ ಬೇಡಿಕೆ, ಕನಸು ಈಗ ಈಡೇರಿದೆ. ಕೇವಲ ಖಾದಿಯಿಂದ ರಾಷ್ಟ್ರ ಧ್ವಜದ ಬಟ್ಟೆಯನ್ನು ಮಾತ್ರ ನೇಯ್ದು ಕೊಡುತ್ತಿದ್ದ ಸಂಘಕ್ಕೆ ಈಗ ರಾಷ್ಟ್ರಧ್ವಜವನ್ನೂ ಸಿದ್ದ ಪಡಿಸಿಕೊಡುವ ಅನುಮತಿ ದೊರೆತಿದೆ.
“ಕ್ಷೇತ್ರೀಯ ಸೇವಾ ಸಂಘ“ವು 1980 ರಿಂದ ಖಾದಿ ಬಟ್ಟೆಯಿಂದ ರಾಷ್ಟ್ರಧ್ವಜದ ಬಟ್ಟೆ ನೇಯ್ದು ಕೊಡುತ್ತಿದ್ದ ಆ ಸಂಘಕ್ಕೆ ರಾಷ್ಟ್ರಧ್ವಜ ಸಿದ್ಧಪಡಿಸುವ ಅನುಮತಿ ದೊರೆತಿರಲಿಲ್ಲ. ಅದಕ್ಕಾಗಿ ಸಂಘ ಸಾಕಷ್ಟು ಪತ್ರ ವ್ಯವಹಾರ ಕೂಡ ನಡೆಸಿತ್ತು . ಆದರೆ, ಇದೀಗ ಐದು ದಶಕಗಳ ಅವರ ಶ್ರಮಕ್ಕೆ ಫಲ ಸಿಕ್ಕಿದೆ.
ಗರಗ ಗ್ರಾಮದ ಕ್ಷೇತ್ರೀಯ ಸೇವಾ ಸಂಘವು ಖಾದಿ ಬಟ್ಟೆ ತಯಾರಿಕೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೇ ದೇಶದ ಅನೇಕ ಕಡೆಗಳಿಗೆ ರಾಷ್ಟ್ರಧ್ವಜಕ್ಕೆ ಬಟ್ಟೆ ಇಲ್ಲಿಂದಲೇ ಹೋಗುತ್ತದೆ. “ಧ್ವಜಕ್ಕೆ ಬಟ್ಟೆ ಸಿದ್ಧಪಡಿಸುವ ನಮಗೆ ರಾಷ್ಟ್ರಧ್ವಜ ತಯಾರಿಸಲೂ ಸಹ ಅನುಮತಿ ಕೊಡಬೇಕು” ಎಂದು ಸಂಘ ಮನವಿ ಮಾಡುತ್ತಲೇ ಬಂದಿತ್ತು. ಇಲ್ಲಿ ಸಿದ್ಧಪಡಿಸಲಾಗುವ ಧ್ವಜದ ಬಟ್ಟೆಯನ್ನು ಮುಂಬೈಯಲ್ಲಿರುವ “ಬಾಂಬೆ ಖಾದಿ ಡೈಯರ್ಸ್ ಆ್ಯಂಡ್ ಪ್ರಿಂಟರ್ಸ” ಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ರಾಷ್ಟ್ರಧ್ವಜವಾಗಿ ಪರಿವರ್ತನೆಗೊಂಡು ಬಂದ ನಂತರ ಇದೇ ಗರಗ ಕೇಂದ್ರದಿಂದ ಅವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಗರಗದ ಇದೇ ಕೇಂದ್ರದಲ್ಲಿ ಈಗ ತಯಾರಾದ ಬಟ್ಟೆಯನ್ನು ಧ್ವಜವಾಗಿ ಸಿದ್ದ ಪಡಿಸುವ ಅನುಮತಿ ಸಹ ಸಿಕ್ಕಿದ್ದು ಗರಗ ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದೆ.
ಜೂನ್ 3 ರಂದು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಅಡಿ 2×3 ಅಳತೆಯ ರಾಷ್ಟ್ರಧ್ವಜ ಸಿದ್ಧಪಡಿಸಲು ಅನುಮತಿ ದೊರೆತಿದೆ. ಈ ಕೇಂದ್ರದಲ್ಲಿ 320 ಜನ ನೌಕರರು ಕೆಲಸ ಮಾಡುತ್ತಿದ್ದು, ರಾಷ್ಟ್ರಧ್ವಜ ಇಲ್ಲೇ ಸಿದ್ಧಪಡಿಸಲು ಅನುಮತಿ ದೊರೆತಿರುವುದು ಖುಷಿ ತಂದಿದೆ ಎಂದು ರಾಜೇಶ ಹರ್ಷ ವ್ಯಕ್ತಪಡಿಸಿದರು.
ಪರವಾನಿಗೆ ನವೀಕರಣದ ವೇಳೆ 3×4.5 ಹಾಗೂ 4×6 ಅಳತೆಯ ಧ್ವಜ ನಿರ್ಮಾಣಕ್ಕೂ ಪರವಾನಿಗಿ ಕೇಳುವುದಕ್ಕೆ ಸಂಘ ಸಿದ್ಧವಾಗಿದೆ. ಈ ಕೇಂದ್ರದಲ್ಲಿ ಇದೀಗ 15 ವಿದ್ಯುತ್ ಚಾಲಿತ ಯಂತ್ರಗಳಿದ್ದು, ಅವುಗಳ ಮೂಲಕವೇ ಧ್ವಜಕ್ಕೆ ಹೊಲಿಗೆ ಹಾಕಲಾಗುತ್ತದೆ. ಇಲ್ಲಿ ನೇಯುವ ನೇಕಾರರಿಗೆ ಒಂದು ಮೀಟರ್ ಬಟ್ಟೆಗೆ ಕೇವಲ 18 ರೂಪಾಯಿ ನೀಡಲಾಗುತ್ತಿದೆ. ಒಂದು ದಿನದಲ್ಲಿ ಒಬ್ಬ ನೇಕಾರ 8 ಮೀಟರ್ ಬಟ್ಟೆಯನ್ನಷ್ಟೇ ನೇಯಬಲ್ಲ. ಸರ್ಕಾರ ಈ ಸಂಘಕ್ಕೆ ಬೆಂಬಲ ನೀಡಿ ನೇಕಾರರ ಶ್ರಮಕ್ಕೆ ಸೂಕ್ತ ವೇತನ ಸಿಗುವಂತೆ ಮಾಡಬೇಕಿದೆ.