ಬೆಳಗಾವಿ : ಸತತ ಮೂರನೇ ವರುಷವೂ ಬೆಳೆದ ಬೆಳೆ ಅತಿವೃಷ್ಟಿಯಿಂದ ಹಾಳಾದ ಹಿನ್ನಲೆಯಲ್ಲಿ ಕೃಷಿಗಾಗಿ ಮಾಡಿದ ಸಾಲ ತೀರಿಸಲು ಮತ್ತು ಮನೆ ನಿರ್ವಹಿಸಲು ಸಾಧ್ಯವಾಗದ್ದಕ್ಕೆ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ರೈತ ಬೆಳಗಾವಿಯ ತಮ್ಮ ಬಾಡಿಗೆ ಮನೆಯಲ್ಲಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
34 ವರ್ಷದ ಕೃಷಿಕ ರಾಜಶೇಖರ ಫಕೀರಪ್ಪ ಬೋಳೆತ್ತಿನ ಎಂಬುವರು ಮೃತ ದುರ್ದೈವಿ. ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಪಡೆದು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.
ಸೋಮವಾರ ತಮ್ಮ ಎರಡನೇ ಮಗುವಿನ ಮೊದಲನೇ ಹುಟ್ಟುಹಬ್ಬ ಆಚರಿಸಿ ಮಂಗಳವಾರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಹೊಸೂರಿನಲ್ಲಿರುವ ತಮ್ಮ ತಂದೆಯ ಮನೆಗೆ ಕಳುಹಿಸಿ ಮಗುವಿನ ಜೋಳಿಗೆ ಬಟ್ಟೆ ಬಳಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿಗೆಂದು ರಾಜಶೇಖರ ತಮ್ಮ ತಂದೆಯ ಹೆಸರಿನಲ್ಲಿದ್ದ ಹೊಲದ ಮೇಲೆ ಬ್ಯಾಂಕ್ ಮತ್ತು ಕೈಗಡ ಸಾಲ ಪಡೆದಿದ್ದರು. ಅಲ್ಲದೇ ಹೊಲದ ಸ್ವಲ್ಪ ಭಾಗವನ್ನು ಇತರ ರೈತರಿಗೆ ಭೋಗ್ಯದ ಆಧಾರದ ಮೇಲೆ ನೀಡಿದ್ದರು. 2019ರಿಂದ ಬೆಳೆದ ಬೆಳೆ ಅತಿವೃಷ್ಟಿಯಿಂದ ಹಾಳಾಗಿತ್ತು. ಈ ವರ್ಷವೂ ಅವರು ಬೆಳೆದಿದ್ದ ಸೋಯಾಬಿನ್ ವಿಪರೀತ ಅಕಾಲಿಕ ಮಳೆಯಿಂದ ಕೈಗೆ ಬಂದಿರಲಿಲ್ಲ.
ಈ ಕಾರಣಗಳಿಂದ ಮತ್ತು ಮಾಡಿದ ಸಾಲ ತೀರಿಸುವದು, ಕುಟುಂಬ ನಿರ್ವಹಿಸುವದು ಸಾಧ್ಯವಾಗದು ಎಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಕ್ಯಾಂಪ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.