ಮಥುರಾ: ಯಮುನಾ ಎಕ್ಸಪ್ರೆಸ್ ವೇ ಸರ್ವೀಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಕೆಂಪು ಬಣ್ಣದ ಟ್ರಾಲಿ ಸೂಟಕೇಸ್‌ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು.
ಈ ಮೃತದೇಹ ದೆಹಲಿಯ ಮೋಡಬಂದ್ ಎಂಬ ಪ್ರದೇಶದ ನಿವಾಸಿ ನಿತೇಶ ಯಾದವ ಅವರ ಪುತ್ರಿ ಆಯುಷಿ ಯಾದವ (21) ಅವರದ್ದಾಗಿದ್ದು, ತಂದೆಯೇ ಮರ್ಯಾದೆಗೆ ಅಂಜಿ ಗುಂಡಿಕ್ಕಿ ಕೊಂದಿರುವುದು ವಿಚಾರಣೆ ವೇಳೆ ಬಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು ಮರ್ಯಾದೆಗೆ ಹೆದರಿ ಗುಂಡಿಕ್ಕಿ ಕೊಂದಿರುವುದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ.
ನವೆಂಬರ 17 ರಂದು ಮಧ್ಯಾಹ್ನ ಕೊಲೆ ನಡೆದಿದ್ದು, ಮೃತದೇಹವನ್ನು ಸೂಟಕೇಸ್‌ನಲ್ಲಿ ತುಂಬಿ ತನ್ನದೇ ಕಾರಿನಲ್ಲಿ ತಂದು ಯಮುನಾ ಎಕ್ಸ್ಪ್ರೆಸ್ ವೇ ಸರ್ವಿಸ್ ರಸ್ತೆಯಲ್ಲಿ ಎಸೆದು ಹೋಗಿದ್ದಾನೆ.
ಘಟನೆಯ ಸಂಬಂಧ ಕೊಲೆಯಾದ ಯುವತಿಯ ತಂದೆ-ತಾಯಿ ಇಬ್ಬರನ್ನೂ ಬಂಧಿಸಲಾಗಿದೆ. ಯುವತಿ ಆಯುಶಿಯು ತಂದೆ-ತಾಯಿಗೆ ಹೇಳದೇ ಆಗಾಗ ಹೊರಗಡೆ ಹೋಗುತ್ತಿದ್ದಳು. ಈ ಕಾರಣ ತಂದೆ-ತಾಯಿ ಮತ್ತು ಮಗಳ ಮಧ್ಯೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.
ಕೊಲೆಯಾದ ದಿನ ಮಗಳು ತಮಗೆ ಹೇಳದೇ ಎಲ್ಲೋ ಹೋಗಿದ್ದಳು, ಆಕೆ ಮನೆಗೆ ಬಂದ ನಂತರ ಪೋಷಕರೊಂದಿಗೆ ಜಗಳವಾಗಿ ಕೋಪದಲ್ಲಿ ತಂದೆ ಆಕೆಯನ್ನು ಹೊಡೆದು ನಂತರ ಲೈಸೆನ್ಸ ಇದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಇದಕ್ಕೂ ಮೊದಲು ಪೊಲೀಸರು ಸಂಶಯದ ಮೇಲೆ ಪೋಷಕರನ್ನು ವಿಚಾರಣೆಗೊಳಪಡಿಸಿದಾಗ ನಿಜ ಸಂಗತಿ ಗೊತ್ತಾಗಿದೆ. ಯುವತಿಯ ದೇಹದ ಹಲವೆಡೆ ಗಾಯಗಳಾಗಿದ್ದು, ಎದೆಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.