ಧಾರವಾಡ : ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಕೋಟೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರ ಹತ್ಯೆಯಾಗಿದೆ. ಅವರಿಗೆ 36 ವರುಷ ವಯಸ್ಸಾಗಿತ್ತು.
ಬಿಜೆಪಿಯ ಕಾರ್ಯಕರ್ತರಾಗಿದ್ದ ಪ್ರವೀಣ ಕಮ್ಮಾರ ಮಂಗಳವಾರ ಅಮೃತ ದೇಸಾಯಿ ಅವರ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲೂ ಭಾಗಿಯಾಗಿದ್ದರು. ಅದೇ ದಿನ ರಾತ್ರಿ ಕೋಟೂರಿನಲ್ಲಿ ನಡೆದ ಗ್ರಾಮದ ಉಡಚಮ್ಮದೇವಿ ಜಾತ್ರೆ ಸಂದರ್ಭದಲ್ಲಿ ಪ್ರಸಾದ ವಿತರಣೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದೆ. ಪ್ರವೀಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದ ಎನ್ನಲಾಗಿದೆ.
ಆದರೆ, ಮದ್ಯದ ಅಮಲಿನಲ್ಲಿ ಜಗಳ ಮಾಡಿದ್ದ ಗುಂಪು ನಂತರ ಪ್ರವೀಣ ಕಮ್ಮಾರ ಅವರಿಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ ಅವರನ್ನು ಚಿಕಿತ್ಸೆಗಾಗಿ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬುಧವಾರ ನಸುಕಿನ ಜಾವ ಅವರು ಸಾವನ್ನಪ್ಪಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ನಾಲ್ವರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದ್ದು ಪೊಲೀಸರು ಇವರನ್ನು ಹುಡುಕುತ್ತಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೂರಿನಲ್ಲಿ ನೀರವ ಮೌನ ಆವರಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿಯೇ ಈ ಹತ್ಯೆ ನಡೆದಿದ್ದು, ಯಾವುದೇ ಗಲಾಟೆಗಳು ಉಂಟಾಗದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ. ಹತ್ಯೆ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದ್ದು, ತಂಡವನ್ನು ಕೂಡ ರಚನೆ ಮಾಡಲಾಗಿದೆ.