ಧಾರವಾಡ, ೧೫- ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆ ಅಪ್ಡೇಟ್ ಮಾಡುವ ಹೆಸರಿನಲ್ಲಿ ಓಟಿಪಿ ಪಡೆದು ಹಣ ವಂಚಿಸುವ ವಿಧಾನ ಒಂದು ಕಡೆಯಾದರೆ ಮತ್ತೊಂದು ಕಡೆ ವಿಡಿಯೋ ಕಾಲ್ ಮಾಡುವ ಯುವತಿಯರು, ಅರೆನಗ್ನರಾಗಿ ತಾವು ಕಾಲ್ ಮಾಡಿದವರಿಗೂ ಇದೇ ರೀತಿ ಮಾಡಲು ಹೇಳುವ ಮೂಲಕ ಅದನ್ನು ರೆಕಾರ್ಡ ಮಾಡಿಕೊಂಡು ಬಳಿಕ ಬ್ಲ್ಯಾಕಮೇಲ್ ಮಾಡುತ್ತಾರೆ.
ಇದೀಗ ಇಂಥವುದೇ ಇಂಥ ಘಟನೆ ಧಾರವಾಡದಲ್ಲಿ ನಡೆದಿದೆ. ನಿವೃತ್ತ ಪ್ರೊಫೆಸರ್ ಒಬ್ಬರಿಗೆ ವಿಡಿಯೋ ಕಾಲ್ ಮಾಡಿದ್ದ ಅಂಜಲಿ ಶರ್ಮಾ ಎಂದು ಹೇಳಿಕೊಂಡಿದ್ದ ಯುವತಿಯೊಬ್ಬಳು ತನ್ನ ಸಹಚರ ವಿಕ್ರಮ ಎಂಬಾತನೊಂದಿಗೆ ಸೇರಿಕೊಂಡು ಒಟ್ಟು 21 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾಳೆ.
ಆರಂಭದಲ್ಲಿ ಮರ್ಯಾದೆಗೆ ಅಂಜಿದ್ದ ನಿವೃತ್ತ ಪ್ರೊಫೆಸರ್ ಆಕೆ ಕೇಳಿದಷ್ಟು ಹಣ ನೀಡಿದ್ದರು. ಯಾವಾಗ ಅವರ ಬೇಡಿಕೆ ದಿನೇ ದಿನೇ ಹೆಚ್ಚಾದಾಗ ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಅದೇಗೋ ನಿವೃತ್ತ ಪ್ರೊಫೆಸರ್ ಮೊಬೈಲ್ ನಂಬರ್ ಸಂಪಾದಿಸಿದ ಈ ಯುವತಿ ಅವರಿಗೆ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ಪ್ರಚೋದಕ ಮಾತುಗಳನ್ನಾಡುತ್ತಾ ಆಕೆ ಬೆತ್ತಲೆಯಾಗಿ, ಅವರನ್ನೂ ಬೆತ್ತಲೆಯಾಗಿಸಿದ್ದಾಳೆ. ನಂತರ ಇದೆಲ್ಲವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ ಮಾಡಿಕೊಂಡಿದ್ದಾಳೆ. ಬಳಿಕ ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ ಎಂದು ಹೇಳಿಕೊಂಡು ವಿಕ್ರಮ ಎಂಬಾತ ಕರೆ ಮಾಡಿದ್ದು, ವಿಚಾರ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಮೊದಲಿಗೆ ಹೆದರಿದ ನಿವೃತ್ತ ಪ್ರೊಫೆಸರ್ ಅವರು ಕೇಳಿದಾಗೆಲ್ಲ ಹಣ ರವಾನಿಸಿದ್ದು, ಈ ಮೊತ್ತ ಬರೋಬ್ಬರಿ 21 ಲಕ್ಷ ರೂಪಾಯಿಗಳಾಗಿದೆ. ಯಾವಾಗ ಅವರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟರೋ ಆಗ ಹುಬ್ಬಳ್ಳಿ ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲದೆ ತನಗೆ ಮೋಸ ಆದ ರೀತಿಯಲ್ಲಿ ಮತ್ಯಾರಿಗೂ ಆಗಬಾರದೆಂಬ ಕಾರಣಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.