ಬೆಳಗಾವಿ: ಹಲಗಾ-ಬಸ್ತವಾಡ ಗ್ರಾಮಗಳ ಬಳಿಯ ಸುವರ್ಣ ವಿಧಾನಸೌಧ ಎದುರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವಾಗ ಮರಾಠಿ ಭಾಷಿಕರು ತಮ್ಮ ಜೀಪ್ ತಡೆದು, ಹಲ್ಲೆ ಮಾಡುವ ಬೆದರಿಕೆಯೊಡ್ಡಿ ವಾಹನದ ಗಾಜಿಗೆ ಕಲ್ಲು ಎಸೆದಿದ್ದಾರೆ ಎಂಬ ಸುಳ್ಳು ಕಥೆ ಕಟ್ಟಿದ್ದ ಸರ್ಕಾರಿ ವಾಹನ ಚಾಲಕನ ಬಣ್ಣ ಬಯಲಾಗಿದ್ದು, ಕುಡಿದ ನಶೆಯಲ್ಲಿ ವಾಹನ ಅಪಘಾತಗೊಳಪಡಿಸಿ ನೈಜ ಘಟನೆಯನ್ನು ಮುಚ್ಚಿ ಹಾಕಿ ಸುಳ್ಳು ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಸಂಬಂಧಿಸಿದ ವಾಹನ ಚಾಲಕ ಚೇತನ ಎನ್ ವಿ ಎಂಬವರು ಚಳಿಗಾಲ ಅಧಿವೇಶನಕ್ಕಾಗಿ ಬುಧವಾರ ಬೆಳಗಾವಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೀಗೆ…..
———————–
ಡಿ. ಬುಧವಾರ 14ರಂದು ಬೆಳಗ್ಗೆ 7:45ರ ಸುಮಾರಿಗೆ ಬೆಂಗಳೂರಿನಿಂದ ಬೊಲೆರೋ ವಾಹನ ಚಾಲನೆ ಮಾಡಿಕೊಂಡು ಅಧಿವೇಶನಕ್ಕಾಗಿ ಚೇತನ ಬೆಳಗಾವಿ ಕಡೆಗೆ ಬರುತ್ತಿದ್ದರು. ಸಂಜೆ 4:30ರ ಸುಮಾರಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ತಡಸ ಕ್ರಾಸ್ ನ ಬಾರ್ ಒಂದರಲ್ಲಿ ಮದ್ಯಪಾನದ ನಂತರ ಊಟ ಮಾಡಿ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ.
ತನಿಖೆಯಲ್ಲಿ ಸರ್ಕಾರಿ ಕಾರ್ ಚಾಲಕ ಚೇತನ ನಾಟಕ ಬಹಿರಂಗವಾಗಿದೆ. ಅಧಿವೇಶನದ ಕರ್ತವ್ಯಕ್ಕಾಗಿ ಚಾಮರಾಜಪೇಟೆಯಿಂದ ಬೆಳಗಾವಿಗೆ ಬಂದಿದ್ದ ಚೇತನ ನಿನ್ನೆ ಸಂಜೆ ಬೆಳಗಾವಿಗೆ ಬರುವ ಮೊದಲೇ ಬೊಲೆರೋ ವಾಹನ ಅಪಘಾತಕ್ಕೀಡಾಗಿದೆ. ಹಿರೇಬಾಗೇವಾಡಿ ಟೋಲ್ ನಲ್ಲಿ ವಾಹನದ ಗಾಜು ಜಖಂ ಆಗಿರುವುದು ಬಯಲಿಗೆ ಬಂದಿದ್ದು, ಸಿಸಿಟಿವಿ ದೃಶ್ಯ ತೋರಿಸಿದಾಗ ಚಾಲಕ ಚೇತನ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಬಾರ್ ಒಂದರಲ್ಲಿ ಮದ್ಯಪಾನ ಮಾಡಿ ಬೆಳಗಾವಿ ಕಡೆಗೆ ಬರುವಾಗ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ಬೊಲೆರೋ ಡಿಕ್ಕಿ ಹೊಡೆದು ವಾಹನದ ಗಾಜು ಒಡೆದಿದೆ. ತನ್ನ ತಪ್ಪು ಗೊತ್ತಾದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಯದಿಂದ ಚೇತನ ಕಟ್ಟುಕತೆ ಕಟ್ಟಿ ಮರಾಠಿಗರು ಕಲ್ಲು ತೂರಾಟ ನಡೆಸಿಮ ಬೆದರಿಕೆ ಹಾಕಿದ್ದಾರೆ ಎಂದು ಹಿರೇಬಾಗೇವಾಡಿ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.
ರಾತ್ರಿ 10:30ರ ಸುಮಾರಿಗೆ ಸುವರ್ಣ ವಿಧಾನಸೌಧ ದಾಟಿದ ಬಳಿಕ ಹಲಗಾ-ಬಸ್ತವಾಡ ಬಳಿ ಐದಾರು ಜನ ಮರಾಠಿ ಮಾತನಾಡುವವರು ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ್ದರು. ಗಾಜು ಪುಡಿ ಪುಡಿ ಮಾಡಿದ್ದರು. ನಂತರ ನನ್ನ ಮೇಲೆ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ವಾಹನ ಚಲಾಯಿಸಿಕೊಂಡು ತಪ್ಪಿಸಿಕೊಂಡು ಬಂದಿರುವುದಾಗಿ ವಾಹನ ಚಾಲಕ ಸುಳ್ಳು ದೂರು ದಾಖಲಿಸಿದ್ದನು.ಆದರೆ ಗ್ಲಾಸ್ ಒಡೆದಿದ್ದ ಬೊಲೆರೋ ವಾಹನ ರಾತ್ರಿ 7:30ರ ಸುಮಾರಿಗೆ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ದಾಟಿದೆ.
ತನ್ನ ತಪ್ಪಿನಿಂದ ವಾಹನದ ಗ್ಲಾಸು ಒಡೆದಿದೆ ಅಂತ ಗೊತ್ತಾದರೆ ತನ್ನ ಮೇಲೆ ಮೇಲಧಿಕಾರಿಗಳು ಶಿಸ್ತು ಕ್ರಮ ಜರುಗಿಸಬಹುದೆಂದು ಚಾಲಕ ಚೇತನ ಈ ನೈಜ ಘಟನೆಯನ್ನು ಮುಚ್ಚಿಟ್ಟು ಮರಾಠಿಯಲ್ಲಿ ಮಾತನಾಡುತ್ತಿದ್ದ ಕೆಲವರು ತನ್ನ ವಾಹನದ ಕ್ಲಾಸ್ ಒಡೆದಿದ್ದಾರೆಂದು ಸುಳ್ಳು ದೂರು ನೀಡಿದ್ದ.
ನಂತರ ಪೊಲೀಸರು ತನಿಖೆ ನಡೆಸಿದಾಗ, ದೂರುದಾರ ಹೇಳಿದ ಹಾಗೆ ಯಾವುದೇ ವ್ಯಕ್ತಿಗಳು ವಾಹನದ ಗ್ಲಾಸ್ ಒಡೆದಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಚಾಲಕ ಸುಳ್ಳು ದೂರು ದಾಖಲಿಸಿ ತನ್ನ ತಪ್ಪು ಮರೆ ಮಾಚಲು ಇಂಥ ನಾಟಕವಾಡಿದ್ದಾನೆ ಎನ್ನುವುದು ಬಯಲಾಯಿತು.
ನೈಜ ಘಟನೆ ಆಗಿದ್ದನ್ನು ಮರೆ ಮಾಚಿಸಿ ಸುಳ್ಳು ದೂರು ನೀಡಿದ್ದನು. ಬೆಳಗಾವಿಯಲ್ಲಿ ಕನ್ನಡ-ಮರಾಠಿಗರ ಮಧ್ಯೆ ವಿವಾದ ಎದ್ದಿರುವ ಈ ಸಮಯದಲ್ಲಿ ತುಪ್ಪ ಸುರುವಿ ಬೆಂಕಿ ಹಚ್ಚಲು ಯತ್ನಿಸಿದ್ದ ಚಾಲಕನ ನಿಜ ಬಣ್ಣವನ್ನು ಡಿಸಿಪಿ ಗಡಾದಿ ಹೊರಗೆಡವಿದ್ದಾರೆ. ಇಂಥ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಡಿಸಿಪಿ ರವೀಂದ್ರ ಗಡಾದಿ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.