ಪ್ರಧಾನಿ ಕಾರ್ಯಾಲಯದ ಅಧಿಕಾರಿ ಎಂದು ಹೇಳಿ ಝೆಡ್ ಪ್ಲಸ್ ಭದ್ರತೆ, ಪಂಚತಾರಾ ಹೋಟೆಲ್ ವಾಸ್ತವ್ಯ ಪಡೆದಿದ್ದ ಗುಜರಾತಿ ವಂಚಕ!

A B Dharwadkar
ಪ್ರಧಾನಿ ಕಾರ್ಯಾಲಯದ ಅಧಿಕಾರಿ ಎಂದು ಹೇಳಿ ಝೆಡ್ ಪ್ಲಸ್ ಭದ್ರತೆ, ಪಂಚತಾರಾ ಹೋಟೆಲ್ ವಾಸ್ತವ್ಯ ಪಡೆದಿದ್ದ ಗುಜರಾತಿ ವಂಚಕ!
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಶ್ರೀನಗರ: ಪ್ರಧಾನ ಮಂತ್ರಿಗಳ ಕಾರ್ಯಾಲಯದ ಅಧಿಕಾರಿ ಎಂದು ಹೇಳಿ ಗುಜರಾತ್ ಮೂಲದ ಮಹಾ ವಂಚಕನೊಬ್ಬ ಝೆಡ್ ಪ್ಲಸ್ ಭದ್ರತೆ, ಗುಂಡುನಿರೋಧಕ ವಾಹನ, ಪಂಚತಾರಾ ಹೋಟೆಲ್ ವಾಸ್ತವ್ಯ  ಆದಿ ಇನ್ನೂ ಹೆಚ್ಚು ಸೌಲಭ್ಯ ಪಡೆದು ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಮೂರ್ಖರನ್ನಾಗಿ ಮಾಡಿದ ವಿಚಿತ್ರ ಘಟನೆ  ವರದಿ ಆಗಿದೆ.

ತಾನು ಉನ್ನತ ಶ್ರೇಣಿಯ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಯನ್ನು ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ.

 

ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ವ್ಯೂಹ ಮತ್ತು ಕಾರ್ಯತಂತ್ರ ವಿಭಾಗದ ಹೆಚ್ಚುವರಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿದ ಕಿರಣ್ ಭಾಯಿ ಪಟೇಲನನ್ನು ಕನಿಷ್ಠ 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದರೂ ಈ ಸಂಗತಿಯನ್ನು ಪೊಲೀಸರು ಗೋಪ್ಯವಾಗಿಟ್ಟಿದ್ದರು. ಗುರುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾಗಲೇ ಈ ಸಂಗತಿ ಬೆಳಕಿಗೆ ಬಂದಿತು. 

ಟ್ವಿಟರ್ ನಲ್ಲಿ ಕಿರಣ ಭಾಯಿ ಪಟೇಲ್ ದೃಢೀಕರಣಗೊಂಡಿರುವ ಖಾತೆದಾರನಾಗಿದ್ದು, ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ ಸಿನ್ಹಾ ವಘೇಲಾ ಸೇರಿದಂತೆ ಸಾವಿರಾರು ಮಂದಿ ಆತನನ್ನು ಹಿಂಬಾಲಿಸುತ್ತಿದ್ದಾರೆ. ಆತ ತಾನು ಕಾಶ್ಮೀರಕ್ಕೆ ನೀಡಿದ್ದ ಅಧಿಕೃತ ಭೇಟಿಯ ಬಗ್ಗೆ ಹಲವಾರು ಭಾವಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ. ಈ ಪೈಕಿ ಆತ ಕೊನೆಯ ಭಾವಚಿತ್ರವನ್ನು ಮಾರ್ಚ 2ರಂದು ಹಂಚಿಕೊಂಡಿದ್ದ. ಆ ಭಾವಚಿತ್ರಗಳಲ್ಲಿ ಆತನ ರಕ್ಷಣೆಗೆ ಸುತ್ತ ಅರೆ ಸೇನಾಪಡೆಯ ಸೈನಿಕರು ಸುತ್ತುವರಿದಿರುವುದನ್ನು ಕಾಣಬಹುದಾಗಿದೆ.

ಆತನ ಟ್ವಿಟರ್ ವ್ಯಕ್ತಿ ವಿವರದ ಪ್ರಕಾರ, ಆತ ವರ್ಜಿನಿಯಾದ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ, ತಿರುಚ್ಚಿಯ ಐಐಎಂನಲ್ಲಿ ಎಂಬಿಎ, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಹಾಗೂ ಬಿಇ ಪದವಿ ಪಡೆದಿದ್ದೇನೆ ಎಂದು ಪ್ರತಿಪಾದಿಸಿದ್ದಾನೆ. ಅಲ್ಲದೆ ತನ್ನನ್ನು ತಾನು “ಚಿಂತಕ, ವ್ಯೂಹ ತಜ್ಞ, ವಿಶ್ಲೇಷಕ ಹಾಗೂ ಕಾರ್ಯತಂತ್ರ ವ್ಯವಸ್ಥಾಪಕ” ಎಂದೂ ಬರೆದುಕೊಂಡಿದ್ದಾನೆ.

ವಂಚಕನೊಬ್ಬ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಸೋಗು ಹಾಕುತ್ತಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಪೊಲೀಸರಿಗೆ ಎಚ್ಚರಿಕೆ ರವಾನಿಸಿದ್ದವು. ಆತನ ಹಿನ್ನೆಲೆಯನ್ನು ಪರಿಶೀಲಿಸಿದ ನಂತರ ಆತನನ್ನು ಶ್ರೀನಗರದ ಹೋಟೆಲ್ ಒಂದರಿಂದ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ವಂಚಕ ಪಟೇಲ್‌ ನನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚುವಲ್ಲಿ ಕರ್ತವ್ಯ ಲೋಪ ಎಸಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ತನಿಖೆಯಲ್ಲಿ ಗುಜರಾತ್ ಪೊಲೀಸರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ವಂಚಕ ಕಿರಣ ಭಾಯಿ ಪಟೇಲ್ ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಆರೋಗ್ಯ ರೆಸಾರ್ಟ್ ಒಂದಕ್ಕೆ ತೆರಳಿದ್ದ ಎಂದು ಹೇಳಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.