ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಪರಿಸರದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಸಿಸಿ ಕೆಮೆರಾದಲ್ಲಿ ಎರಡು ಮರಿಗಳೊಂದಿಗೆ ಚಿರತೆಯ ಚಿರತೆಗಳ ಚಲನವಲನ ಪತ್ತೆಯಾಗಿದೆ.
ನಾಗರದಿನ್ನಿ ಗ್ರಾಮದ ಸುರೇಶ ಕುಬಕಡ್ಡಿ ಎಂಬ ರೈತರು ಮಹದೇವ ಕೋಲಕಾರ ಎಂಬ ರೈತರ ಜಮೀನಿನಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಇರುವುದನ್ನು ನೋಡಿದ್ದರು. ಚಿರತೆಯನ್ನು ಕಂಡಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಲೇ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ವನ್ಯ ಜೀವಿಗಳ ಚಲನವಲನ ಅರಿಯಲು ಸಿ.ಸಿ. ಕ್ಯಾಮೆರಾ ಅಳವಡಿಸಿದ್ದಾರೆ. ಅದರಂತೆ ಜಮೀನಿನಲ್ಲಿ ಮರಿಗಳೊಂದಿಗೆ ಚಿರತೆ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೊಲ್ಹಾರ ತಹಶೀಲ್ದಾರ, ಎಸ್.ಎಸ್. ನಾಯಕಲಮಠ, ಅರಣ್ಯ ಅಧಿಕಾರಿ ಬಸವರಾಜ ಕೊಣ್ಣೂರ ಅವರು, ಜನರು ಸುರಕ್ಷಿತವಾಗಿ ಓಡಾಡುವಂತೆ ಹಾಗೂ ಒಬ್ಬೊಬ್ಬರೇ ಓಡಾಡುವ ಬದಲು ಒಬ್ಬರಿಗಿಂತ ಹೆಚ್ಚು ಜನರು ಕೂಡಿ ಓಡಾಡುವಂತೆ ಸಲಹೆ ನೀಡಿದ್ದಾರೆ.
ತಾವು ಇರಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಚಿರತೆ ಚಲನವಲನ ಪತ್ತೆಯಾಗಿದ್ದು, ಶೀಘ್ರವೇ ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.