ನೋಯ್ಡಾ : ಮಾಡಿದ ಕೆಲಸಕ್ಕೆ ಪೂರ್ಣ ಹಣ ಕೊಡದೇ ಪೀಡಿಸಿದ ಕಾರಣಕ್ಕೆ ಟೈಲ್ಸ್ ಮಾರಾಟಗಾರನೊಬ್ಬ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ನೋಯ್ಡಾ ಸದರ್ಪುರ್ ಕಾಲೋನಿಯಲ್ಲಿ ನಡೆದಿದೆ.
ಕಾರು ಮಾಲೀಕರು ಇತ್ತೀಚೆಗೆ ತಮ್ಮ ಮನೆಯಲ್ಲಿ ಟೈಲ್ಸ್ ಅಳವಡಿಸಿದ್ದಾರೆ. ಆದರೆ, ಅವರು ಟೈಲ್ಸ್ ಮಾರಾಟಗಾರರಿಗೆ ಪೂರ್ಣ ಮೊತ್ತವನ್ನು ಪಾವತಿಸಲಿಲ್ಲ. ಬಾಕಿ ಹಣ ನೀಡದಿದ್ದಕ್ಕಾಗಿ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಮನೆಯ ಹೊರಗೆ ನಿಲ್ಲಿಸಲಾಗಿದ್ದ ಕಾರಿಗೆ ಬೈಕ್ ಸವಾರನೊಬ್ಬ ಬೆಂಕಿ ಹಚ್ಚಿದ್ದಾನೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಬೆಂಕಿಯು ತನ್ನಷ್ಟಕ್ಕೆ ತಾನೇ ಆರಿಹೋಯಿತು. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಣವೀರ ಹುಟ್ಟೂರು ಬಿಹಾರ ಎಂದು ಎಸಿಪಿ ರಜನೀಶ ವರ್ಮಾ ಹೇಳಿದ್ದು, ನೋಯ್ಡಾದಲ್ಲಿ ಕೆಲಸ ಮಾಡಲು ಬಿಹಾರದಿಂದ ಬಂದಿದ್ದಾನೆ. ಆತ ಮನೆಗಳಲ್ಲಿ ಟೈಲ್ಸ್ ಹಾಕುತ್ತಿದ್ದ ಎಂದಿದ್ದಾರೆ.
ಆಯುಷ್ ಚೌಹಾಣ ತನ್ನ ಮನೆಯಲ್ಲಿ ಟೈಲ್ಸ್ ಅಳವಡಿಸಿದ್ದಾರೆ ಎಂದು ಆರೋಪಿ ಹೇಳಿಕೊಂಡಿದ್ದು, ಆದರೆ ಚೌಹಾಣ ಉಳಿದ 2.68 ಲಕ್ಷ ರೂ.ಗಳನ್ನು ಆತನಿಗೆ ಪಾವತಿಸಿಲ್ಲ. ಪದೇ ಪದೇ ಹಣ ಕೇಳಿದ ನಂತರವೂ ಚೌಹಾಣ ಹಣ ಪಾವತಿಸದಿದ್ದಾಗ, ರಣವೀರ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಚೌಹಾಣ ಕಾರಿಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.



