ಬಸವನಬಾಗೇವಾಡಿ : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರ ಭಾಗದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆಯ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಈ ಘಟನೆ ಸಂಭವಿಸಿದೆ. 26 ವರುಷದ ರೇಣುಕಾ ಅಮೀನಪ್ಪ ಕೋನಿನ್ ಅವರು, ತಮ್ಮ ಮಕ್ಕಳಾದ ಯಲ್ಲವ್ವ (2) ಮತ್ತು ಅಮೃತಾ (1) ಅವರೊಂದಿಗೆ ಕಾಲುವೆಗೆ ಬಿದ್ದು ಸಾವಿಗೆ ಶರಣರಾಗಿದ್ದಾರೆ.
ಕಳೆದ ಭಾನುವಾರದಿಂದ ರೇಣುಕಾ ಅವರು ಗಂಡನ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿದ್ದರು.
ಗಂಡನ ಮನೆಯವರು ಅವರಿಗಾಗಿ ಹುಡುಕಾಡಿದ್ದರು. ಕೊನೆಗೆ ಕಾಣೆಯಾಗಿದ್ದರ ಕುರಿತು ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇಂದು ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆಯಾಗಿವೆ. ಮತ್ತೋರ್ವ ಹೆಣ್ಣು ಮಗುವಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದ್ದು ದೂರು ದಾಖಲಿಸಿಕೊಂಡಿದ್ದಾರೆ.