ಬೈಲಹೊಂಗಲ : ಪಾರ್ಶ್ವವಾಯು ಪೀಡಿತರಾಗಿ ತಮ್ಮ ಒಂದು ಕಾಲಿನ ಸ್ವಾಧೀನ ಕಳೆದುಕೊಂಡಿದ್ದ 24 ವರ್ಷದ ಯುವಕ, ರೋಗಕ್ಕೆ ಬೇಸತ್ತು ತಮ್ಮ ಕಾಲಿನ ಪಾದವನ್ನು ಕತ್ತರಿಸಿಕೊಂಡ ಪ್ರಕರಣ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ರಾಜು ಫಕೀರಪ್ಪ ಯರಗುದ್ದಿ ಕೆಲ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಭೀಕರವಾದ ಕಠಿಣ ರೋಗಕ್ಕೆ ಒಳಗಾದ ಅವರು ಮನೆಯವರು ತಮಗೆ ಮಾಡುವ ಸೇವೆಯಿಂದ ನೊಂದು ಮಾನಸಿಕವಾಗಿ ಜರ್ಜರಿತರಾಗಿ, ಜಿಗುಪ್ಸೆಗೊಂಡು ಸ್ಪರ್ಶಜ್ಞಾನ ಕಳೆದುಕೊಂಡ ಅವರು ಮನೆಯಲ್ಲಿ ಯಾರೂ ಇಲ್ಲದಾಗ ಕಬ್ಬು ಕತ್ತರಿಸುವ ಕೋಯ್ತಾದಿಂದ ತಮ್ಮ ಕಾಲು ಕತ್ತರಿಸಿಕೊಂಡಿದ್ದಾರೆ. ನಿಸ್ತೇಜಗೊಂಡಿರುವ ಕಾಲಿನ ಪಾದ ಕಾಲಿನಿಂದ ಪ್ರತ್ಯೇಕಗೊಂಡಿದೆ.
ನಿಸ್ತೇಜಗೊಂಡ ತಮ್ಮ ಕಾಲಿನ ಭಾಗವನ್ನು ಕತ್ತರಿಸಿದ ನಂತರವೂ ಯಾವುದೇ ಸ್ಪಂದನೆ ಅನುಭವಿಸದ ರಾಜು ಅವರನ್ನು ಸ್ವಲ್ಪ ಸಮಯದ ನಂತರ ಗಮನಿಸಿದ ನೆರೆಯವರು ಆಂಬುಲೆನ್ಸ್ ಮೂಲಕ ದೇಹದಿಂದ ಬೇರ್ಪಟ್ಟ ಪಾದದ ಸಮೇತ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಯ ಎಲುಬು ಕೀಲು ವಿಭಾಗದವರು ಬೇರ್ಪಟ್ಟ ಪಾದವನ್ನು ಪುನಃ ಕಾಲಿಗೆ ಜೋಡಿಸುವ ಶಸ್ತ್ರಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ.