ಉಡುಪಿ: ಮುಸ್ಲಿಮ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದ ಪ್ರಾಧ್ಯಾಪಕರನ್ನು ಮಣಿಪಾಲ ವಿಶ್ವವಿದ್ಯಾಲಯ ಅಮಾನತುಗೊಳಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್‌ಸ್ಟಿಟ್ಯೂಟ್ ನ ಇಂಜಿನಿಯರಿಂಗ ಘಟಕವಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ತನ್ನ ಪ್ರಾಧ್ಯಾಪಕನ ಮೇಲೆ ವಿದ್ಯಾರ್ಥಿ ಆಕ್ಷೇಪ ತೋರುತ್ತಿರುವ ವೀಡಿಯೊದ ಕುರಿತು ಅಕಾಡೆಮಿ ತನಿಖೆ ಪ್ರಾರಂಭಿಸಿದೆ.
ವಿಚಾರಣೆ ಮುಗಿಯುವವರೆಗೆ ಪ್ರಾಧ್ಯಾಪಕರು ಯಾವುದೇ ತರಗತಿಗಳನ್ನು ತೆಗೆದುಕೊಳ್ಳದಂತೆ ಡಿಬಾರ್ ಮಾಡಲಾಗಿದೆ ಎಂದು ಹೇಳಲಾಗಿದೆ.
ನಾವು ಅಂತಹ ಘಟನೆಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತೇವೆ. ‘ಘಟನೆಯ ಸಂದರ್ಭ’ವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಮಣಿಪಾಲ ಅಕಾಡೆಮಿ ಮೀಡಿಯಾ ಸೆಲ್ ನಿರ್ದೇಶಕ ಎಸ್.ಪಿ. ಕರ್ ತಿಳಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಅನೇಕರು ಹಂಚಿಕೊಂಡಿರುವ ವೀಡಿಯೊದಲ್ಲಿ, ವಿದ್ಯಾರ್ಥಿಯೊಬ್ಬರು ಪ್ರೊಫೆಸರ್ ಅವರ ಟೀಕೆಗಳ ಬಗ್ಗೆ ಪ್ರಶ್ನಿಸುತ್ತಿರುವುದನ್ನು ತೋರಿಸುತ್ತದೆ. ನಂತರದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗೆ ನೀನು ತನ್ನ ಮಗನಂತೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಿಕೊಂಡಿದ್ದಾರೆ.
“ನೀವು ನಿಮ್ಮ ಮಗನಿಗೆ ಹಾಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂಬ ಹೆಸರಿನಿಂದ ಕರೆಯುತ್ತೀರಾ? ”ಎಂದು ವಿದ್ಯಾರ್ಥಿ ವಾದಿಸುವಾಗ ಪ್ರಾಧ್ಯಾಪಕರು ಕ್ಷಮೆಯಾಚಿಸುವುದು ವೀಡಿಯೊದಲ್ಲಿ ಕೇಳಿಬರುತ್ತದೆ. ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕರ್ ಹೇಳಿದ್ದಾರೆ.