ಗೋಕಾಕ, ೩೦: ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟದ ಕಚೇರಿ (ಸೆಕ್ರೆಟರಿಯಟ್) ಪ್ರಾರಂಭಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ಜನತೆಗೆ ನೈಜ ಅಧಿಕಾರ ವಿಕೇಂದ್ರಿಕರಣದ ಪ್ರಯೋಜನ ದೊರೆಯಬೇಕು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಅಶೋಕ ನಿಂಗಯ್ಯಾಸ್ವಾಮಿ ಪೂಜಾರಿ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ದಶಕದ ಹಿಂದೆ ಬೆಳಗಾವಿಯಲ್ಲಿ ನಿರ್ಮಿಸಲಾಗಿತ್ತು. ಇದರಿಂದ ಆಡಳಿತ ವಿಕೇಂದ್ರೀಕರಣವಾಗಿ ಕಾರ್ಯದರ್ಶಿ ಮಟ್ಟದ ಕಚೇರಿಗಳು ಸುವರ್ಣಸೌಧದಲ್ಲಿ ಸ್ಥಾಪಿತಗೊಂಡು ಇಡೀ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಈ ಭಾಗದ ಜನರ ಕನಸಾಗಿತ್ತು. ಆದರೆ ದುರ್ದೈವದಿಂದ ಅದು ಕನಸಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಬೇಕು ಬೇಡಿಕೆಗಳಿಗೆ ಪೂರಕವಾದ ಸರಕಾರದ ಅಂತಿಮ ಆದೇಶಗಳು ಇಲ್ಲಿಂದಲೇ ದೊರೆಯಬೇಕು. ಆ ರೀತಿಯ ಪೂರಕ ಚರ್ಚೆ ಮತ್ತು ಹಕ್ಕೊತ್ತಾಯ ಡಿಸೆಂಬರ ೪ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಚಿವರು ಮತ್ತು ಜನಪ್ರತಿನಿಧಿಗಳಿಂದ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಅಧಿವೇಶನದಲ್ಲೇ ಬೆಳಗಾವಿಯಲ್ಲಿ ಸೆಕ್ರೆಟೇರಿಯಟ್ ಕಚೇರಿ ಸ್ಥಾಪನೆಯ ಕುರಿತ ನಿರ್ಣಯ ಅಂಗೀಕರಿಸಬೇಕು ಮತ್ತು ಇದಕ್ಕೆ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಅಶೋಕ ಪೂಜಾರಿ ಆಗ್ರಹಿಸಿದ್ದಾರೆ. ಒಂದು ವೇಳೆ ಈ ವಿಷಯದಲ್ಲಿ ಯಾವುದೇ ನಿರ್ಣಯ ಆಗದಿದ್ದರೆ ಉತ್ತರ ಕರ್ನಾಟಕ ಭಾಗದ ಜನರಿಂದ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಲಿದೆ ಎಂದು ಪೂಜಾರಿ ಎಚ್ಚರಿಸಿದ್ದಾರೆ.