ಕೋಲಾರ,30: ಕಲುಷಿತ ಆಹಾರ ಅಥವಾ ಮಲಿನ ನೀರು ಸೇವಿಸಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥವಾದರೆ ಮೂರು ನಾಲ್ಕು ದಿನ ರಜೆ ಕೊಡುತ್ತಾರೆಂದು ಭಾವಿಸಿ ವಿದ್ಯಾರ್ಥಿಯೊಬ್ಬ ಶಾಲೆಯ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಿದ ಪ್ರಕರಣ ಬಂಗಾರಪೇಟೆ ತಾಲ್ಲೂಕಿನ ದೊಡ್ಡಪೋನಾಂಡಹಳ್ಳಿಯಲ್ಲಿ ಜರುಗಿದೆ.
ದೊಡ್ಡಪೋನಾಂಡಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ನಿಲಯ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೋರ್ವನಿಗೆ 2-3 ದಿನ ರಜೆ ಪಡೆದು ಮನೆಗೆ ತೆರಳಿ ತಂದೆ ತಾಯಿ ನೋಡುವ ಆಸೆಯಾಗಿದೆ. ಆದರೆ ಸೂಕ್ತ ಕಾರಣವಿಲ್ಲದೇ ರಜೆ ದೊರೆಯಲಾರದು ಎಂದು ಆತ ಶಾಲೆಯ ಮಕ್ಕಳು ಆಹಾರ ಇಲ್ಲವೇ ನೀರು ಸೇವಿಸಿ ಅಸ್ವಸ್ಥಗೊಂಡರೆ 2-3 ದಿನ ರಜೆ ಸಿಗುತ್ತದೆ, ಆಗ ಮನೆಗೆ ಹೋಗಬಹುದು ಎಂದು ಭಾವಿಸಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಇಲಿ ಕೊಲ್ಲುವ ಪಾಷಾಣ ಬೆರಸಿದ್ದಾನೆ.
ಈ ನೀರನ್ನು ಸೇವಿಸಿದ ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಬಂಗಾರಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಾಲೆಯ ಶಿಕ್ಷಕರ ಹೇಳಿಕೆಯನ್ವಯ ಮಾಹಿತಿ ನೀಡಿರುವ ಕಾಮಸಮುದ್ರ ಪೊಲೀಸರು “ವಿಷ ಬೆರಸಿದ ವಿದ್ಯಾರ್ಥಿ ಇತ್ತೀಚಿಗೆ ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ, ಹಾಗಾಗಿ ಪಾಲಕರನ್ನು ನೋಡುವ ಅವಕಾಶಕ್ಕಾಗಿ ಈ ರೀತಿ ಮಾಡಿರಬಹುದು ಎಂದು ತಿಳಿಸಿದ್ದಾರೆ.