ಚೆನ್ನೈ: ಕಳೆದ ಹಲವು ವರ್ಷಗಳಿಂದ ದರೋಡೆ ಮಾಡುತ್ತಿದ್ದ ಕಳ್ಳನೊಬ್ಬನ ವಿಲಕ್ಷಣ ಗುಣವೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಕಳ್ಳ ತಿಂಗಳಿಗೆ ಒಂದು ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ. ಅದಕ್ಕೆ ಕಾರಣ ಬಡವರಿಗೆ ಸಹಾಯ ಮಾಡುವದಾಗಿತ್ತು. ಇಂಥ ವಿಚಿತ್ರ ಕಳ್ಳನೀಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
1993 ರ ತಮಿಳು ಚಲನಚಿತ್ರ, ನಟ ಅರ್ಜುನ ಸರ್ಜಾ ನಟಿಸಿದ ಮತ್ತು ಶಂಕರ ನಿರ್ದೇಶಿಸಿದ ಜೆಂಟಲ್ಮ್ಯಾನ್ ಕೂಡ ಇದೇ ರೀತಿಯ ಕಥೆಯನ್ನು ಹೊಂದಿದ್ದು, ಇದೀಗ ಸಿಕ್ಕಿಬಿದ್ದಿರುವ ಎಗ್ಮೋರ್ನ ರಸ್ತೆ ಬದಿಯಲ್ಲಿ ವಾಸಿಸುವ 33 ವರ್ಷದ ಅನ್ಬುರಾಜನದ್ದೂ ಅದೇ ಕಥೆ.
ಇತ್ತೀಚೆಗೆ, ಚೆನ್ನೈ ನಿವಾಸಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಮನೆ ಕಳವು ಮಾಡಲಾಗಿತ್ತು. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರ ಕೈಗೆ ಅನ್ಬುರಾಜ ಸಿಕ್ಕಿಬಿದ್ದಿದ್ದ. ಎಗ್ಮೋರ್ ರೈಲು ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ದಿನಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ ಅಪರಾಧ ವಿಭಾಗದ ಪೊಲೀಸರು ಆತನನ್ನು ಬಂಧಿಸಿದ್ದರು.
ಈತನ ಇತಿಹಾಸ ಕೆದಕಿದಾಗ ಪೊಲೀಸರು ಅಚ್ಚರಿಗೊಂಡಿದ್ದರು. ಏಕೆಂದರೆ ಕಳೆದ ನಾಲ್ಕು ತಿಂಗಳಲ್ಲಿ ಪೆರುಂಗಲತ್ತೂರ ಪ್ರದೇಶವೊಂದರಲ್ಲೇ ಪ್ರತಿ ತಿಂಗಳು ಒಂದು ಮನೆಯಲ್ಲಿ ಈ ಕಳ್ಳ ಕಳವು ಮಾಡುತ್ತಿದ್ದ ಮತ್ತು ಕಳವು ಮಾಡಿದ್ದನ್ನೆಲ್ಲ ಬಡವರಿಗೆ ನೀಡುತ್ತಿದ್ದ ಎನ್ನುವ ವಿಷಯ ತಿಳಿದು ಬಂತು.