ಕೊಪ್ಪಳ: ಸಾಲ ತೀರಬೇಕೆಂದರೆ ಬೆತ್ತಲೆ ಪೂಜೆ ಮಾಡಬೇಕೆಂದು ಹೇಳಿ ಬಾಲಕನಿಂದ ಕೆಲವರು ಬೆತ್ತಲೆ ಪೂಜೆ ಮಾಡಿಸಿದ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ.
ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ತಂದೆಯ ಸಾಲ ತೀರುತ್ತದೆ ಮತ್ತು ಹಣ ಕೈಸೇರುತ್ತದೆ ಎಂದು ನಂಬಿಸಿ ಹುಡುಗನಿಗೆ ಬೆತ್ತಲೆ ಪೂಜೆ ಮಾಡುವಂತೆ ಮಾಡಿದ್ದಾರೆ. ನಂತರ ಅದರ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಬಾಲಕನ ಪೋಷಕರು ಕೊಪ್ಪಳದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
16 ವರ್ಷದ ಬಾಲಕನನ್ನು ಪುಸಲಾಯಿಸಿ ಆತನಿಗೆ ಬೆತ್ತಲೆ ಪೂಜೆ ಮಾಡುವಂತೆ ಗ್ರಾಮಸ್ಥರು ಸೂಚಿಸಿದ್ದು ಬೆತ್ತಲೆ ಪೂಜೆ ವಿಡಿಯೋ ವೈರಲ್ ಆಗಿದೆ. ಹಾಗೂ ವಿಕೃತ ಮೆರೆದವರ ವಿರುದ್ಧ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ರೂಮ್ವೊಂದರಲ್ಲಿ ಬಾಲಕನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿದ್ದಾರೆ.
ಅಲ್ಲದೇ ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದ ಜೂನ್ನಲ್ಲೇ ಈ ಘಟನೆ ನಡೆದಿದ್ದು, ಗ್ರಾಮದ ಕೆಲ ಜನರ ಮೊಬೈಲ್ಗೆ ಪೂಜೆ ಸಲ್ಲಿಸಿದ ವಿಡಿಯೋ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ವಿವರ :
16 ವರ್ಷದ ಬಾಲಕನ ತಂದೆಯೊಬ್ಬರು ಕೊಪ್ಪಳದಲ್ಲಿ ಮನೆ ಕಟ್ಟಿಸಿದ್ದರು. ಮನೆ ಕಟ್ಟಿಸಲು ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವ ಸಲುವಾಗಿ ಮಗ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ದಿನಗೂಲಿ ನೌಕರನಾಗಿ ಸಾಧ್ಯವಾದಷ್ಟು ಸಂಪಾದಿಸಿ ಮನೆಯ ಸಾಲ ತೀರಿಸಲು ಶ್ರಮಿಸುತ್ತಿದ್ದ. ಬಾಲಕ ತನ್ನ ಕಷ್ಟವನ್ನು ಕೆಲವರ ಬಳಿ ಹೇಳಿಕೊಂಡಿದ್ದಾನೆ.
ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತೆ ಅಂತ ಬಾಲಕನನ್ನು ಕೆಲವರು ಪುಸಲಾಯಿಸಿದ್ದಾರೆ.. ಬಳಿಕ ರೂಮ್ ನಲ್ಲಿ ಬಾಲಕ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಪೂಜೆ ಮಾಡುವ ನಾಟಕ ಮಾಡಲಾಗಿದೆ. ಪೂಜೆಯ ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸ್ ಆಪ್, ಯೂಟ್ಯೂಬ್ ಗಳಲ್ಲಿ ಶರಣಪ್ಪ ಮತ್ತು ತಂಡ ವೈರಲ್ ಮಾಡಿದೆ ಎಂದು ದೂರಲಾಗಿದೆ. ಶರಣಪ್ಪ, ಇರುಪನಗೌಡ, ಶರಣಪ್ಪ ತಳವರ ವಿರುದ್ಧ ಬಾಲಕನ ಕುಟುಂಬ ದೂರು ದಾಖಲಿಸಿದೆ.
ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಕೊಪ್ಪಳ ಮೂಲದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕನ ಹೇಳಿಕೆಯಂತೆ, ಆರೋಪಿಗಳೊಂದಿಗೆ ಜೂನ್‌ನಲ್ಲಿ ತಿಮ್ಮಸಾಗರ ಗ್ರಾಮದಲ್ಲಿ ಜಲ ಜೀವನ ಮಿಷನ್‌ನ ಪೈಪ್‌ಲೈನ್ ಹಾಕುವ ಕೆಲಸಕ್ಕೆ ಹುಬ್ಬಳ್ಳಿಗೆ ಬಂದಿದ್ದರು.
ಬಾಲಕ ಹಾಗೂ ಕೊಪ್ಪಳ ಜಿಲ್ಲೆಯ ಗ್ರಾಮ ತೊರೆದಿರುವ ಆರೋಪಿಗಳ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಜೂನ್ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿ ಬೆತ್ತಲೆ ಪೂಜೆ ನಡೆಸಲಾಗಿದೆ ಎಂದು ಬಾಲಕ ಹೇಳಿಕೆ ನೀಡಿದ್ದು, ತಂಡವೊಂದು ಹುಬ್ಬಳ್ಳಿಗೂ ಭೇಟಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.