ಉನ್ನಾವೊ: ಅತಿಕ್ರಮಣ ತೆರವು ಕಾರ್ಯಾಚರಣೆ ವಿರೋಧಿಸಿ ಮಹಿಳೆಯೊಬ್ಬಳು ಮಕ್ಕಳೊಂದಿಗೆ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೋದ ಹಸನಗಂಜ್ ತಹಸಿಲ್ನ ಇಟ್ಕುಟಿ ಗ್ರಾಮದ ವಿಕ್ರಮ ಖೇಡಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಲು ಮುಂದಾಗಿದ್ದ ಕಂದಾಯ ಇಲಾಖೆಯ ತಂಡದ ಎದುರೇ ಮಹಿಳೆಯೊಬ್ಬರು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದಳು. ಬಡಪಾಯಿ ಮಹಿಳೆ ತನ್ನ ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಇಲಾಖೆಯ ತಂಡ ಒತ್ತುವರಿ ತೆರವಿಗೆ ಗುರುವಾರ ಗ್ರಾಮಕ್ಕೆ ತೆರಳಿತ್ತು. ತಂಡವು ಅತಿಕ್ರಮಣದಾರ ಅಜಯ ಎಂಬವರಿಗೆ ಸೈಟ್ ತೆರವುಗೊಳಿಸಲು ಕೇಳಿದರು. ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಂಪೂರ್ಣ ಮಾತುಕತೆ ನಡೆದಿದೆ. ಈ ಹೊತ್ತಿಗೆ ಅವರ ಪತ್ನಿಯು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು, ತಾನೂ ಸುರಿದುಕೊಂಡು ಗುಡಿಸಲಿಗೆ ಬೆಂಕಿ ಹಚ್ಚಿಕೊಂಡರು ಎಂದು ಈ ಘಟನೆ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿಕ್ರಮ ಖೇಡದಲ್ಲಿರುವ ಸರ್ಕಾರಿ ಜಾಗದಲ್ಲಿ ಅಜಯ ಎಂಬುವರು ಮನೆ ನಿರ್ಮಾಣ ಮಾಡಿರುವ ಬಗ್ಗೆ ದೂರುಗಳು ಬಂದ ಕಾರಣ ಅದನ್ನು ತೆಗೆದುಹಾಕುವಂತೆ ತಿಳಿಸಲಾಗಿದೆ ಎಂದು ಹಸಂಗಂಜ್ ಉಪವಿಭಾಗಾಧಿಕಾರಿ ಅಂಕಿತ ಶುಕ್ಲಾ ಪತ್ರಕರ್ತರಿಗೆ ತಿಳಿಸಿದರು. ಆರೋಪಿ ಅಜಯ ಸರ್ಕಾರಿ ವಸತಿ ಯೋಜನೆಯ ಫಲಾನುಭವಿಯಾಗಿದ್ದು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಆರೋಪದ ಮೇರೆಗೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೂಡ ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದು ಫೆಬ್ರವರಿ 13 ರಂದು, ಕಾನಪುರ ದೇಹತ್ ಜಿಲ್ಲೆಯ ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದೌಲಿ ಗ್ರಾಮದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಬಡಪಾಯಿ ಮಹಿಳೆ ಮತ್ತು ಅವರ ಮಗಳು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡಿದ್ದರು. ಈ ವೇಳೆ ಇಬ್ಬರೂ ಜೀವಂತ ದಹಿಸಿ ಹೋಗಿದ್ದರು. ಘಟನೆಯ ನಂತರ ರಾಜ್ಯದ ಯೋಗಿ ಸರ್ಕಾರವು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು, ಬಡವರ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಬುಲ್ಡೋಜರ್ಗಳನ್ನು ಬಳಸುವುದನ್ನು ಟೀಕಿಸಲಾಗಿತ್ತು.