ಗ್ವಾಲಿಯರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಗ್ವಾಲಿಯರ್ ನ ಕಮಲಾರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಕಂದರಾ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬಾಕೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶು ಆರೋಗ್ಯದಿಂದ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಗು 2.3 ಕೆಜಿ ತೂಕವಿದ್ದು, ಗ್ವಾಲಿಯರ್ ನ ಜಯಾರೋಗ್ಯ ಆಸ್ಪತ್ರೆ ಗ್ರೂಪ್ ನ ಸೂಪರಿಟೆಂಡೆಂಟ್ ಮತ್ತು ವೈದ್ಯರ ತಂಡ ನಾಲ್ಕು ಕಾಲುಗಳನ್ನು ಹೊಂದಿರುವ ಮಗುವನ್ನು ಪರಿಶೀಲಿಸುತ್ತಿರುವುದಾಗಿ ವರದಿ ವಿವರಿಸಿದೆ.
ಜಯಾರೋಗ್ಯ ಆಸ್ಪತ್ರೆ ಸಮೂಹದ ಸೂಪರಿಟೆಂಡೆಂಟ್ ಡಾ.ಆರ್ ಕೆಎಸ್ ಧಾಕಡ್ ಅವರು ಎಎನ್ ಐಗೆ ತಿಳಿಸಿರುವ ಮಾಹಿತಿ ಪ್ರಕಾರ, ಹೆಣ್ಣು ಮಗು ಜನಿಸಿದಾಗ ನಾಲ್ಕು ಕಾಲುಗಳು ಇದ್ದು, ಇದು ದೈಹಿಕ ವಿಕಲತೆಯಾಗಿದೆ. ಇದನ್ನು ವೈದ್ಯಕೀಯ ವಿಜ್ಞಾನ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಭಾಗದಲ್ಲಿ ಎರಡು ಹೆಚ್ಚುವರಿ ಕಾಲುಗಳಿದ್ದು, ಆ ಕಾಲುಗಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದ್ದಾರೆ.
ಮಗುವಿನ ಆರೋಗ್ಯವನ್ನು ತಪಾಸಣೆ ನಡೆಸಿದ ನಂತರ ಎರಡು ನಿಷ್ಕ್ರಿಯ ಕಾಲುಗಳನ್ನು ಸರ್ಜರಿ ಮೂಲಕ ತೆಗೆದು ಹಾಕಲಾಗುವುದು. ಇದರೊಂದಿಗೆ ಆಕೆ ಸಹಜ ಜೀವನ ನಡೆಸಬಹುದಾಗಿದೆ ಎಂದು ಡಾ.ಧಾಕಡ ತಿಳಿಸಿದ್ದಾರೆ.