ಅಥಣಿ : ಅಥಣಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಜನಿಸಿದ್ದ ಗಂಡು ಮಗುವನ್ನು ಇಂದು ಬುಧವಾರ ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಮಗುವನ್ನು ತಾಯಿಯ ಮಡಿಲಿಗೆ ಒಪ್ಪಿಸಿದ್ದಾರೆ.
ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ಅಂಬಿಕಾ ಗುವಿ ಎಂಬವರು ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಅಥಣಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ಮುಂಜಾನೆ ರಾತ್ರಿ ಕಾರ್ಯ ನಿರ್ವಹಿಸಿದ ವಾರ್ಡ್ ಸಿಬ್ಬಂದಿ ಹೋಗಿ ದಿನದ ಡ್ಯೂಟಿ ಸಿಬ್ಬಂದಿ ಬರುವ ಹೊತ್ತಿನಲ್ಲಿ ಅಂದರೆ ಸುಮಾರು 8.30ರ ಹೊತ್ತಿಗೆ ಆಸ್ಪತ್ರೆಯ ನರ್ಸ ಸಮವಸ್ತ್ರದಲ್ಲಿ ಬಂದಿದ್ದ ಮಹಿಳೆಯೊಬ್ಬಳು ಬಾಣಂತಿಯರ ವಾರ್ಡಗೆ ತೆರಳಿ ಅಲ್ಲಿದ್ದ ಬಾಣಂತಿಯರನ್ನು ತಾಯಿ ಕಾರ್ಡ ಮಾಡಿಸಿಕೊಂಡು ಬರಲು ವಾರ್ಡನಿಂದ ಹೊರಗೆ ಕಳುಹಿಸಿ ನಂತರ ತಾಯಿ ಅಂಬಿಕಾ ಅವರ ಬಳಿ ತೆರಳಿ ಮಗುವಿನ ತೂಕ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮಗುವನ್ನು ತೆಗೆದುಕೊಂಡು ಹೋಗಿದ್ದಳು.
ಬಹಳ ಹೊತ್ತು ಆದರೂ ಆಕೆ ಹಿಂದಿರುಗದೇ ಇದ್ದುದ್ದರಿಂದ ಈ ವಿಷಯವನ್ನು ಆಸ್ಪತ್ರೆಯ ನರ್ಸಗಳ ಗಮನಕ್ಕೆ ತಂದಾಗ ಮಗುವನ್ನು ತೆಗೆದುಕೊಂಡು ಹೋದವಳು ಆಸ್ಪತ್ರೆ ನರ್ಸ ಅಲ್ಲವೆಂದು ಗೊತ್ತಾಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಗಮನಕ್ಕೆ ವಿಷಯ ತರಲಾಯಿತು.
ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಮಗುವನ್ನು ತೆಗೆದುಕೊಂಡು ಹೋಗಿದ್ದ ಮಹಿಳೆಯನ್ನು ಗುರುತಿಸಿ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮಹಾರಾಷ್ಟ್ರದ ಸಾಂಗ್ಲಿ ತಾಲೂಕಿನ ಮಹಿಷ್ಯಾಳ ಗ್ರಾಮಕ್ಕೆ ತೆರಳಿ ಮಾಲಾ ಕಾಂಬಳೆ ಎಂಬ ಮಹಿಳೆಯನ್ನು ವಶಕ್ಕೆ ಪಡೆದು ಮಗುವನ್ನು ಪುನಃ ತಾಯಿಗೆ ಒಪ್ಪಿಸಿದರು.
ಬುಧವಾರ ಸಂಜೆ ಅಥಣಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜಯ ಪಾಟೀಲ ಅವರು, ಅಥಣಿ ಪೋಲೀಸರ ಕಾರ್ಯಕ್ಷಮತೆ ಹೊಗಳಿ ಅಪಹರಿಸಿದ್ದ ಮಹಿಳೆಯನ್ನು ಕೂಡಲೇ ಪತ್ತೆ ಹಚ್ಚಿ ಮಗುವನ್ನು ಪುನಃ ತಾಯಿಗೆ ಒಪ್ಪಿಸಿದ ತಂಡಕ್ಕೆ 20 ಸಾವಿರ ರೂಪಾಯಿ ಬಹುಮಾನ ಘೋಷಿಸಿದರು.
ಮಗುವನ್ನು ಅಪಹರಿಸಿದ್ದ ಮಹಿಳೆ ಮಾಲಾ ಕುರಿತು ಹೆಚ್ಚಿನ ವಿಚಾರಣೆ ನಡೆದಿರುವದಾಗಿ ಅವರು ತಿಳಿಸಿದರು.