ಹೊಸದಿಲ್ಲಿ, ೧೪- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನರಬಲಿ ಯತ್ನದ ಆಘಾತಕಾರಿ ಪ್ರಕರಣ ವರದಿಯಾಗಿದೆ. ತನ್ನ ಸತ್ತ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ಮಹಿಳೆ ನವಜಾತ ಮಗುವನ್ನು ಅಪಹರಿಸಿ ಬಲಿ ನೀಡಲು ಮುಂದಾಗಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಪೊಲೀಸರು ಆಕೆಯನ್ನು ತಡೆಯುವ ಮೂಲಕ ಎರಡು ತಿಂಗಳ ಹಸುಗೂಸಿನ ಪ್ರಾಣವನ್ನು ಕಾಪಾಡಿದ್ದಾರೆ.
ಆಗ್ನೇಯ ದೆಹಲಿಯ ಈಸ್ಟ್ ಆಫ್ ಕೈಲಾಶ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ ಆರೋಪಿತ ಮಹಿಳೆ, ನವಜಾತ ಶಿಶುವನ್ನು ಬಲಿ ಮಾಡುವ ಮೂಲಕ ತನ್ನ ಸತ್ತ ತಂದೆಯನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ ಮಗು ಬಲಿ ನೀಡಲು ಮುಂದಾಗಿದ್ದಳು.
ಮಹಿಳೆ ತನ್ನ ಯೋಜನೆಯಲ್ಲಿ ಮುಂದುವರಿಯುವ ಮೊದಲು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಮಗುವನ್ನು ಬಲಿಕೊಡಲು ಮುಂದಾಗಿದ್ದನ್ನು ಒಪ್ಪಿಕೊಂಡಿದ್ದಾಳೆ. ಅಪಹರಣಕ್ಕೊಳಗಾಗಿದ್ದ ಮಗುವನ್ನು 24 ಗಂಟೆಗಳ ಒಳಗೆ ಪೊಲೀಸರು ರಕ್ಷಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಎಳಂತೂರ ಗ್ರಾಮದಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ಕೊಂದು ಅವರ ದೇಹದ ಭಾಗಗಳನ್ನು ಕತ್ತರಿಸಿದ ಕೇರಳದ ‘ನರಬಲಿ’ ಆಘಾತಕಾರಿ ಪ್ರಕರಣದ ತಿಂಗಳುಗಳ ನಂತರ ಈ ಘಟನೆ ನಡೆದಿದೆ.