ಬೆಳಗಾವಿ, 10: ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಹೊರಟ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಯುವ ವೈದ್ಯರೊಬ್ಬರು ಮೃತಪಟ್ಟಿದ್ದು, ಇಬ್ಬರು ಎಂಬಿಎ ಪದವೀಧರರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬಾಗಲಕೋಟ ಜಿಲ್ಲೆಯ ಜಮಖಂಡಿಯ 25 ವರುಷದ ಸೌರಭ ಕಾಂಬಳೆ ಮೃತಪಟ್ಟ ವೈದ್ಯರು. ಲಾರಿಗೆ ವೇಗವಾಗಿ ಬಂದ ಕಾರು ಹಿಂದಿನಿಂದ ರಭಸದಿಂದ ಅಪ್ಪಳಿಸಿ, ಪಲ್ಟಿಯಾಗಿದೆ. ಇದರಲ್ಲಿ ಜಮಖಂಡಿಯ ಗಿರೀಶ ಕರೆಮ್ಮನವರ (25) ಮತ್ತು ಚೇತನ ಧರಿಗೌಡರ ( 25 ) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂವರೂ ಮಂಗಳವಾರ ತಡರಾತ್ರಿ ಪಾರ್ಟಿ ಮುಗಿಸಿ ವಾಪಸ್ ಆಗುವಾಗ ಈ ದುರ್ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ವೇಗವಾಗಿ ಬಂದು ಗುದ್ದಿದ್ದು ಡಿಕ್ಕಿಯ ರಭಸಕ್ಕೆ ಕಾರು ಡಿಕ್ಕಿಯಾಗಿ ನಾಲ್ಕೈದು ಸಲ ಉರುಳಿ ಬಿದ್ದಿದೆ ಎನ್ನಲಾಗಿದೆ.
ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.