ವಿಜಯಪುರ : ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ತೆಪ್ಪ ಮುಗುಚಿ ಓರ್ವ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದು ಇನ್ನೊಬ್ಬ ರಕ್ಷಿಸಲ್ಪಟ್ಟಿದ್ದಾನೆ. ಈ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
17 ವರ್ಷದ ಮಂಜುನಾಥ ಶಿವಪ್ಪ ಚಲವಾದಿ ಮತ್ತು ಆತನ ಸ್ನೇಹಿತ ಮೀನು ಹಿಡಿಯಲು ತೆಪ್ಪದಲ್ಲಿ ತಾರನಾಳ ಕೆರೆಗಿಳಿದಿದ್ದರು. ಕೆರೆಯ ಮಧ್ಯೆ ಮೀನು ಹಿಡಿಯಲು ಬಲೆ ಬೀಸುವಾಗ ಆಯ ತಪ್ಪಿ ತೆಪ್ಪ ಮುಳುಗಿದೆ. ಆಗ ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಮುಳುಗುತ್ತಿದ್ದ ಇವರನ್ನು ಗಮನಿಸಿದ ದಾರಿಹೋಕರು ಅದರಲ್ಲಿ ಓರ್ವನನ್ನು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಯುವಕ ಭಯದಿಂದ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ವಿಷಯ ತಿಳಿದು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕತ್ತಲೆಯಲ್ಲೇ ಕಾರ್ಯಾಚರಣೆ ನಡೆಸಿದರೂ ಮಂಜುನಾಥನ ಶವ ಪತ್ತೆ ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ ಮತ್ತೇ ಕಾರ್ಯಾಚರಣೆ ಪ್ರಾರಂಭಗೊಂಡಾಗ ಗ್ರಾಮಸ್ಥರ ನೆರವಿನಿಂದ ಶವ ಪತ್ತೆ ಹಚ್ಚಲಾಗಿದೆ.
ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.