ಲಖನೌ (ಉತ್ತರ ಪ್ರದೇಶ) : ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಯುವತಿಯೊಬ್ಬಳು ತನ್ನ ವಿವಾಹದ ಸಂದರ್ಭದಲ್ಲಿ ವರನಿಗೆ ಹಾರ ಹಾಕಿದ ತಕ್ಷಣ ಹೃದಯಾಘಾತದಿಂದ ಕುಸಿದು ಪ್ರಾಣಬಿಟ್ಟ ದಾರುಣ ಘಟನೆ ಶನಿವಾರ ಲಖನೌ ಸಮೀಪ ಮಲಿಹಾಬಾದನ ಭದ್ವಾನ್ ಗ್ರಾಮದಲ್ಲಿ ಸಂಭವಿಸಿದೆ.
ರಾಜಪಾಲ್ ಶರ್ಮಾ ಎಂಬವರ 21 ವರುಷದ ಮಗಳು ಶಿವಾಂಗಿ ಅವರ ವಿವಾಹ ಶುಕ್ರವಾರ ನಡೆಯುತ್ತಿತ್ತು, ಆದರೆ ವರನ ತಂಡ ತಡರಾತ್ರಿ ಆಗಮಿಸಿತ್ತು. ವಧು ಮತ್ತು ವರರು ವೇದಿಕೆಯ ಮೇಲೆ ಹಾರಗಳನ್ನು ವಿನಿಮಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಶಿವಾಂಗಿ ಕುಸಿದು ಬಿದ್ದರು. ಅವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಟ್ರಾಮಾ ಸೆಂಟರ್‌ಗೆ ತೆಗೆದುಕೊಂಡು ಹೋಗಲಾಯಿತು. ಆದರೆ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದರು. “ಆಸ್ಪತ್ರೆಗೆ ಕರೆತರುವಾಗಲೇ ನಿಮ್ಮ ಮಗಳು ಹೃದಯಘಾತದಿಂದ ಮೃತಪಟ್ಟಿದ್ದಾಳೆ” ಎಂದು ವೈದ್ಯರು ಘೋಷಿಸಿದರು.
15-20 ದಿನಗಳಿಂದ ಅಸ್ವಸ್ಥ
ಶಿವಾಂಗಿ ಕಳೆದ 15-20 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕಡಿಮೆ ರಕ್ತದೊತ್ತಡ ಹೊಂದಿದ್ದ ಅವರು ಮದುವೆಗೆ ಒಂದು ವಾರದ ಮೊದಲು ಚೇತರಿಸಿಕೊಂಡಿದ್ದರು. ಮದುವೆ ದಿನ ಸಂಜೆ ಅವರಿಗೆ ಮಲಿಹಾಬಾದ ಸಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿ ಅವರ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಕಂಡು ಬಂದ ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಯಿತು, ಆದರೆ ಮದುವೆ ವೇಳೆ ಕುಸಿದು ಬಿದ್ದು ಅವರು ಮೃತಪಟ್ಟಿದ್ದಾರೆ.
ವಧುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಶನಿವಾರ ನೆರವೇರಿಸಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ವಧು ಮತ್ತು ವರನ ಕುಟುಂಬಗಳು ಪ್ರಕರಣದಲ್ಲಿ ಯಾವುದೇ ರೀತಿಯ ವಿಚಾರಣೆಯನ್ನು ಬಯಸಿಲ್ಲ.