ಮಂಗಳೂರು: ಬಸ್, ಜೀಪು, ಲಾರಿಗಳನ್ನು ಚಲಾಯಿಸಲು ಹಿಂದೆ, ಮುಂದೆ ನೋಡುವವರ ಮಧ್ಯೆ ಮಂಗಳೂರಿನ 21ರ ಹರೆಯದ ಯುವತಿ ಹನಿಯಾ ಹನೀಫ ಅವರು ವಿಮಾನ ಚಾಲನೆ ಮಾಡಲು ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.
ಕಮರ್ಷಿಯಲ್ ವಿಮಾನಗಳನ್ನು ಚಾಲನೆ ಮಾಡುವ ಪೈಲಟ್ ಲೈಸೆನ್ಸನ್ನು ಹನಿಯಾ ಪಡೆದುಕೊಂಡಿದ್ದಾರೆ. ಮೂಲತಃ ಕಾಪುವಿನವರಾದ ಪ್ರಸ್ತುತ ಮಂಗಳೂರಿನ ಪಾಂಡೇಶ್ವರದಲ್ಲಿ ನೆಲೆಸಿರುವ ಮಹಮ್ಮದ ಹನೀಫ ಮತ್ತು ನಾಝಿಯಾ ದಂಪತಿಯ ಪುತ್ರಿ ಹನಿಯಾ ಆಕಾಶಮಾರ್ಗದಲ್ಲೇ ಸಂಚರಿಸುವ ಅಧಿಕೃತ ಪರವಾನಗಿಯನ್ನು ದೊರಕಿಸಿಕೊಂಡಿದ್ದಾಳೆ.
9ನೇ ತರಗತಿವರೆಗೆ ದುಬೈನ ದಿ ಇಂಡಿಯನ್ ಹೈಸ್ಕೂಲಿನಲ್ಲಿ ಕಲಿತ ಹನಿಯಾ, ನಂತರ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ 10ನೇ ತರಗತಿಯ ವಿದ್ಯಾಭ್ಯಾಸ ಮಾಡಿದರು. ಪಿಯುಸಿಯನ್ನು ಮಂಗಳೂರಿನ ಮಹೇಶ ಪದವಿಪೂರ್ವ ಕಾಲೇಜಿನಲ್ಲಿ ಕಲಿತ ಬಳಿಕ ತನ್ನ ಪೈಲಟ್ ಆಗುವ ಉತ್ಕಟ ಬಯಕೆಯನ್ನು ಈಡೇರಿಸಲು ಮೈಸೂರಿನ ಓರಿಯಂಟ್ ಫ್ಲೈಟ್ ಏವಿಯೇಶನ್ ಅಕಾಡೆಮಿಗೆ ಸೇರಿದಳು. ಅಲ್ಲಿ ಪೈಲಟ್ ತರಬೇತಿಯನ್ನು ಪಡೆದಿದ್ದಾರೆ. ಮೂರು ವರ್ಷಗಳ ತರಬೇತಿ ಬಳಿಕ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆದಿರುವ ಹನಿಯಾ, 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ್ದು, ಕ್ಯಾಪ್ಟನ್ ಆಗಿ ಆಯ್ಕೆಗೊಂಡಿದ್ದಾರೆ.
ಬಾಲ್ಯದಲ್ಲೇ ಆಕೆಗೆ ಪೈಲಟ್ ಆಗಬೇಕು ಎಂಬ ಆಸೆ ಇತ್ತು. ತಂದೆ, ತಾಯಿಯರಿಗೆ ಅದು ಬದಲಾಗಬಹುದು ಎಂಬ ಅನಿಸಿಕೆ ಇತ್ತು. ಆದರೆ ಪಿಯುಸಿ ಬಳಿಕ ಪೈಲಟ್ ವಿದ್ಯಾಭ್ಯಾಸ ಕಲಿಯಬೇಕು ಎಂದು ಹೇಳಿದಾಗ ಅವಳಿಚ್ಛೆಯಂತೆ ಹೆತ್ತವರು ಮೈಸೂರಿಗೆ ಸೇರಿಸಿದರು.
ಈಗ ಆಕೆಯ ಕನಸು ಈಡೇರಿದೆ. ಹನಿಯಾ ಪೈಲಟ್ ಆಗಿದ್ದಾಳೆ. ಪೈಲಟ್ ಆಗುವುದು ಸಾಮಾನ್ಯ ವಿಷಯವಲ್ಲ. ಶೈಕ್ಷಣಿಕ ಅರ್ಹತೆಗಳು, ಕಠಿಣ ತರಬೇತಿ ಮತ್ತು ದೈಹಿಕ ಸಾಮರ್ಥ್ಯ ಎಷ್ಟು ಮುಖ್ಯವೋ, ಮಾನಸಿಕ ಗಟ್ಟಿತನವೂ ಅಷ್ಟೇ ಮುಖ್ಯ. ಪೈಲಟ್ ಎಂಬುದೇ ಸಾಹಸಮಯ ಜೀವನ. ಮಹಮ್ಮದ ಹನೀಫ ಮತ್ತು ನಾಝಿಯಾ ದಂಪತಿಗೆ ಜನಿಸಿದ ನಾಲ್ಕು ಮಕ್ಕಳಲ್ಲಿ ಹನಿಯಾ ಮೊದಲನೆಯವಳು, ಕೋವಿಡ್ ಸಮಯದಲ್ಲಿ ಪ್ರಾಯೋಗಿಕ ಕಲಿಕೆಯಲ್ಲಿನ ತೊಂದರೆಗಳನ್ನು ಮತ್ತು ನಂತರ ಪ್ರವಾಹ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕಲಿಕೆಗೆ ಅಡ್ಡಿಯಾದರೂ ಹನಿಯಾ ಛಲ ಬಿಡಲಿಲ್ಲ.ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರೋತ್ಸಾಹಿಸಲು ಪೋಷಕರು ತುಂಬಾ ಹಿಂಜರಿಯುತ್ತಾರೆ. ಆದರೆ ಹನಿಯಾ ಪೋಷಕರ ಮಾರ್ಗದರ್ಶನವೂ ಇಲ್ಲಿ ಪೂರಕವಾಗಿ ಕೆಲಸ ಮಾಡಿದೆ.