ಪಾಟ್ನಾ : 950 ರೂಪಾಯಿ ಸಾಲದ ಹಣವನ್ನು ವ್ಯಕ್ತಿಯೊಬ್ಬರು ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಯುವಕನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.
ದಾಳಿಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲೆಯ ಕಿಶನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಾಯಾಳು ಅರ್ಜುನ ಮುಖಿ ಮೇಲೆ ಅದೇ ಗ್ರಾಮದ ಗಣೇಶ ಸ್ವರ್ಣಕರ ಹಾಗೂ ಅವರ ಪುತ್ರಿ ಆಸಿಡ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 950 ರೂಪಾಯಿ ಸಾಲವನ್ನು ಸಂತ್ರಸ್ತ ಯುವಕ ಪಡೆದಿದ್ದ. ಈ ಹಣವನ್ನು ಕೊಡದಿದ್ದಕ್ಕೆ ಆಸಿಡ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಗಾಯಾಳು ಅರ್ಜುನ್ ಮುಖಿಯನ್ನು ಕುಟುಂಬಸ್ಥರು ಮೊದಲು ಚಿಕಿತ್ಸೆಗಾಗಿ ಕಿಶನಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಪ್ರಥಮ ಚಿಕಿತ್ಸೆಯ ನಂತರ, ಅವರನ್ನು ಸುಪಾಲ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.