ಬೆಂಗಳೂರು, ೬- “ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿಯೇ?” ಎಂದು ಕಾಂಗ್ರೆಸ್ ನಾಯಕ ದಿನೇಶ ಗೂಂಡೂರಾವ ಪ್ರಶ್ನಿಸಿದ್ದಾರೆ. ಟ್ವಿಟರ್ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, “ಭಾಗ್ ಮಿಲ್ಕಾ ಭಾಗ್ ಎಂಬಂತೆ ಮೋದಿ ಆಡಳಿತದಲ್ಲಿ ಮೆಹುಲ್ ಚೋಕ್ಸಿ, ನೀರವ ಮೋದಿ, ಲಲಿತ ಮೋದಿ, ಮಲ್ಯ ಸೇರಿದಂತೆ ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಓಡಿ ಹೋಗಿದ್ದಾರೆ. ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿಯೇ ?” ಎಂದು ಕೇಳಿದ್ದಾರೆ.
“ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ ಭಾರತೀಯ ಜೀವ ವೀಮಾ ಕಂಪನಿ (ಎಲ್ ಐ ಸಿ ) ಯ 23 ಸಾವಿರ ಕೋಟಿ ರೂಪಾಯಿ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಕೊಟ್ಟ ಸಾವಿರಾರು ಕೋಟಿ ರೂಪಾಯಿ ಸಾಲಕ್ಕೆ ಪಂಗನಾಮ ಗ್ಯಾರಂಟಿಯೇ ?” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದೇಕೆ ? ಅದಾನಿ ವಂಚನೆಯ ಬಗ್ಗೆ ಮಾತಾಡಲು ಮೋದಿಯವರಿಗೆ ಸ್ನೇಹ ಅಡ್ಡಿಯಾಗುತ್ತಿದೆಯೇ?”.
“ಸ್ನೇಹಕ್ಕಾಗಿ ದೇಶದ ಲಕ್ಷಾಂತರ ಜನರ ಹೂಡಿಕೆ ಹಣವನ್ನು ಅಪಾಯದಲ್ಲಿಡುತ್ತಿದ್ದಾರೆಯೇ ಮೋದಿ? ಪ್ರಧಾನಿ ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ?” ಎಂದು ಅವರು ಪ್ರಶ್ನಿಸಿದ್ದಾರೆ.
“ಆರ್ಥಿಕ ಅಪರಾಧಗಳ ಬಗ್ಗೆ ತಮ್ಮದು ಝೀರೋ ಟಾಲರೆನ್ಸ್ ನಿಲುವು ಎಂದು ಮೋದಿಯವರು ಹೇಳುತ್ತಾರೆ. ಆದರೆ ಅದಾನಿ ಎಸಗಿದ ಆರ್ಥಿಕ ಅಪರಾಧದ ಬಗ್ಗೆ ಮೋದಿಯವರ ವ್ಯಾಖ್ಯಾನವೇನು? ಜಾರಿ ನಿರ್ದೇಶನಾಲಯ ಸಿಬಿಅಯ್ ಮತ್ತು ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರಕಾರದ ರಾಜಕೀಯ ವಿರೋಧಿಗಳ ವಿರುದ್ಧ ತನಿಖೆ ಮಾಡುವ ಸಂಸ್ಥೆಗಳೆ ? ಮೋದಿಯವರ ಅತ್ಯಾಪ್ತರಿಗೆ ಈ ತನಿಖಾ ಸಂಸ್ಥೆಗಳಿಂದ ವಿನಾಯಿತಿ ಇದೆಯೇ?” ಎಂದಿದ್ದಾರೆ.
ಸಾರ್ವಜನಿಕರ ಜೀವನ ಭದ್ರತೆಗಾಗಿ ಕಾಂಗ್ರೆಸ್ 1956ರಲ್ಲಿ ಎಲ್ ಐ ಸಿ ಸ್ಥಾಪಿಸಿತ್ತು. 2021ರವರೆಗೆ ಅಲ್ಲಿದ್ದ ಜನರ ಹಣ ಸುಭದ್ರವಾಗಿತ್ತು. ಆದರೆ 2021ರಲ್ಲಿ ಈ ಸರ್ಕಾರ ಆ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿತ್ತು.ಎಲ್ ಐ ಸಿ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದು ಯಾರ ಅನುಕೂಲಕ್ಕಾಗಿ ಮೋದಿಯವರೇ ? ಎಂದು ಕೇಳಿದ್ದಾರೆ.